ಟ್ರಾಕ್ಟರ್ ರ‍್ಯಾಲಿ ನಡೆಸಲು ಸಾಂವಿಧಾನಿಕ ಹಕ್ಕು ನಮಗಿದೆ: ರೈತರ ಒಕ್ಕೂಟ

Update: 2021-01-18 16:43 GMT

ಹೊಸದಿಲ್ಲಿ, ಜ. 18: ಶಾಂತಿಯುತವಾಗಿ ಟ್ರಾಕ್ಟರ್ ರ‍್ಯಾಲಿ ನಡೆಸಲು ರೈತರಿಗೆ ಸಾಂವಿಧಾನಿಕ ಹಕ್ಕಿದೆ ಎಂದು ಪ್ರತಿಭಟನಾ ನಿರತ ರೈತರ ಒಕ್ಕೂಟ ಸೋಮವಾರ ಹೇಳಿದೆ. ಜನವರಿ 26ರಂದು ನಡೆಯಲಿರುವ ಪ್ರಸ್ತಾವಿತ ಟ್ಯಾಕ್ಟರ್ ರ‍್ಯಾಲಿಯಲ್ಲಿ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟ ಹೇಳಿದೆ.

ರೈತರು ತಮ್ಮ ಟ್ರಾಕ್ಟರ್ ರ‍್ಯಾಲಿಯನ್ನು ರಾಜಪಥದಲ್ಲಿ ಹಾಗೂ ಇತರ ತೀವ್ರ ಭದ್ರತೆಯ ಪ್ರದೇಶದಲ್ಲಿ ನಡೆಸುವುದಿಲ್ಲ. ದಿಲ್ಲಿಯ ಔಟರ್ ರಿಂಗ್ ರೋಡ್‌ನಲ್ಲಿ ಟ್ರಾಕ್ಟರ್ ರ‍್ಯಾಲಿ ನಡೆಸಲಿದ್ದಾರೆ. ಇದರಿಂದ ಗಣರಾಜ್ಯೋತ್ಸವದ ಪರೇಡ್‌ಗೆ ಯಾವುದೇ ರೀತಿಯ ಅಡ್ಡಿ ಉಂಟಾಗಲಾರದು ಎಂದು ಭಾರತೀಯ ಕಿಸಾನ್ ಒಕ್ಕೂಟ (ಲಾಖೋವಾಲ್)ನ ಪಂಜಾಬ್‌ನ ಪ್ರಧಾನ ಕಾರ್ಯದರ್ಶಿ ಪರಮ್‌ಜಿತ್ ಸಿಂಗ್ ತಿಳಿಸಿದ್ದಾರೆ.

‘‘ನಾವು ದಿಲ್ಲಿ ಗಡಿಯಲ್ಲಿ ಸಿಲುಕಿಕೊಂಡಿದ್ದೇವೆ. ಈ ಗಡಿಯಲ್ಲಿ ಧರಣಿ ಕುಳಿತುಕೊಳ್ಳಲು ನಾವಾಗಿಯೇ ನಿರ್ಧರಿಸಿರುವುದು ಅಲ್ಲ. ನಾವು ದಿಲ್ಲಿ ಪ್ರವೇಶಿಸುವುದನ್ನು ತಡೆಯಲಾಯಿತು. ಆದುದರಿಂದ ಗಡಿಯಲ್ಲೇ ಕುಳಿತು ಧರಣಿ ನಡೆಸಬೇಕಾಯಿತು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಉಂಟಾಗದಂತೆ ನಾವು ಟ್ರಾಕ್ಟರ್ ರ‍್ಯಾಲಿಯನ್ನು ಶಾಂತಿಯುತವಾಗಿ ನಡೆಸಲಿದ್ದೇವೆ. ನಾವು ನಮ್ಮ ಸಾಂವಿಧಾನಿಕ ಹಕ್ಕನ್ನು ಕಾರ್ಯರೂಪಕ್ಕೆ ತರಲಿದ್ದೇವೆ ಹಾಗೂ ಖಂಡಿತವಾಗಿ ದಿಲ್ಲಿ ಪ್ರವೇಶಿಸಲಿದ್ದೇವೆ’’ ಎಂದು ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News