ರಾಮ ಮಂದಿರ ನಿರ್ಮಾಣಕ್ಕೆ 1,11,111 ರೂ.ದೇಣಿಗೆ ನೀಡಿದ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್

Update: 2021-01-18 18:04 GMT

ಭೋಪಾಲ್: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ 1.11 ಲಕ್ಷ ರೂ. ದೇಣಿಗೆ ನೀಡಿದ್ದಲ್ಲದೆ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ.

 ದಿಗ್ವಿಜಯ್ ಸಿಂಗ್ ಕಾಂಗ್ರೆಸ್ ಪಕ್ಷದ ಪರ ದೇವಾಲಯ ನಿರ್ಮಾಣಕ್ಕೆ ದೇಣಿಗೆ ನೀಡಿದ ಮೊದಲ ನಾಯಕನಾಗಿದ್ದಾರೆ.

"ಲಾಠಿಗಳು ಹಾಗೂ ಕತ್ತಿಗಳನ್ನು ಹೊತ್ತುಕೊಂಡು ಸಮುದಾಯವನ್ನು ಪ್ರಚೋದಿಸಲು ಘೋಷಣೆ ಕೂಗುವುದು ಯಾವುದೇ ಧಾರ್ಮಿಕ ಕಾರ್ಯಕ್ರಮದ ಭಾಗವಾಗಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳು ಹಿಂದೂ ಧರ್ಮದ ಭಾಗವಾಗಿರಲು ಸಾಧ್ಯವಿಲ್ಲ. ಈ ರೀತಿಯ ಬೆಳವಣಿಗೆಯಿಂದ ಮಧ್ಯಪ್ರದೇಶದ ಉಜ್ಜೈನ್, ಇಂದೋರ್ ಹಾಗೂ ಮಂಡ್ಸೌರ್ ನಲ್ಲಿ ಈಗಾಗಲೇ ಮೂರು ಅಹಿತಕರ ಘಟನೆಗಳು ನಡೆದಿವೆ.ಇದು ಸಮಾಜದಲ್ಲಿನ ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಿದೆ. ಇತರ ಧಾರ್ಮಿಕ ಸಮುದಾಯಗಳು ದೇವಾಲಯ ನಿರ್ಮಾಣಕ್ಕೆ ವಿರುದ್ಧವಾಗಿಲ್ಲ ಎಂದು ನಿಮಗೆ ತಿಳಿದಿದೆ. ಹೀಗಾಗಿ ದೇಶದ ಪ್ರಧಾನಮಂತ್ರಿಯಾಗಿ ಶಸ್ತ್ರಾಸ್ತ್ರಗಳನ್ನು ಹೊತ್ತ ಜನರು ನಿಧಿ ಸಂಗ್ರಹಣೆ ಮೆರವಣಿಗೆಗಳನ್ನು ನಿಲ್ಲಿಸುವಂತೆ ನೀವು ರಾಜ್ಯಗಳಿಗೆ ನಿರ್ದೇಶನ ನೀಡಬೇಕು'' ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ದಿಗ್ವಿಜಯ್ ವಿನಂತಿಸಿದ್ದಾರೆ.

ಮಂದಿರ ನಿರ್ಮಾಣಕ್ಕೆ ಹಣವನ್ನು ಎಲ್ಲಿ ಹಾಗೂ ಯಾವ ಬ್ಯಾಂಕ್ ಖಾತೆಗೆ ದೇಣಿಗೆ ನೀಡಬೇಕೆಂಬ ಬಗ್ಗೆ ನನಗೆ ಮಾಹಿತಿ ಇಲ್ಲದ ಕಾರಣ ಈ ಪತ್ರದೊಂದಿಗೆ ನಾನು ನಿಮಗೆ ಚೆಕ್ ನ್ನು ಕಳುಹಿಸುತ್ತಿದ್ದೇನೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಗೆ 1,11,111 ರೂ. ಚೆಕ್ ನ್ನು ರಾಮಮಂದಿರ ನಿರ್ಮಾಣಕ್ಕೆ ನನ್ನ ಕೊಡುಗೆಯಾಗಿ ನೀಡುತ್ತಿದ್ದೇನೆ ಎಂದು ದಿಗ್ವಿಜಯ್ ಪತ್ರದಲ್ಲಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News