22,000ಕ್ಕೂ ಅಧಿಕ ಮಹಿಳೆಯರಿಗೆ ಸಾವಿರಾರು ರೂ. ವಂಚಿಸಿದ್ದ ಗುಜರಾತಿನ ಬಟ್ಟೆ ವ್ಯಾಪಾರಿಯ ಬಂಧನ

Update: 2021-01-19 15:19 GMT

ಮುಂಬೈ,ಜ.19: ತನ್ನ ಮಾರಾಟ ಜಾಲತಾಣದ ಮೂಲಕ 22,000ಕ್ಕೂ ಅಧಿಕ ಮಹಿಳೆಯರಿಗೆ ಸಾವಿರಾರು ರೂ.ಗಳನ್ನು ವಂಚಿಸಿದ್ದ ಗುಜರಾತಿನ ಸೂರತ್‌ನ ಸಿದ್ಧ ಉಡುಪುಗಳ ತಯಾರಕನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಆಶಿಷ್ ಅಹಿರ್ (32) ಕಂಪ್ಯೂಟರ್ ಇಂಜಿನಿಯರ್ ಆಗಿದ್ದು, ಲಂಡನ್‌ನಲ್ಲಿ ಉನ್ನತ ವ್ಯಾಸಂಗವನ್ನು ಮಾಡಿದ್ದ. ಇಷ್ಟೊಂದು ವಿದ್ಯಾವಂತನಾಗಿದ್ದರೂ ತನ್ನ ಫ್ಯಾಕ್ಟರಿ ಕಳೆದ ಕೆಲವು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸಿದ ಬಳಿಕ ಅಪರಾಧ ಲೋಕಕ್ಕೆ ಇಳಿದಿದ್ದ. ಕೊರೋನ ವೈರಸ್ ಲಾಕ್‌ಡೌನ್‌ನಿಂದಾಗಿ ಆತನ ಆರ್ಥಿಕ ಸ್ಥಿತಿ ತೀರ ಹದಗೆಟ್ಟಿತ್ತು. ಸಾಲದ ಸುಳಿಯಲ್ಲಿ ಸಿಲುಕಿದ್ದ ಆತ ಜನರನ್ನು ವಂಚಿಸಲು ಸಿದ್ಧ ಉಡುಪುಗಳ ಮಾರಾಟಕ್ಕಾಗಿ ತನ್ನದೇ ಆದ ‘ಶಾಪೀ ಡಾಟ್ ಕಾಮ್ ’ಎಂಬ ಜಾಲತಾಣವನ್ನು ರೂಪಿಸಿಕೊಂಡಿದ್ದ ಎಂದು ಮುಂಬೈ ಸೈಬರ್ ಘಟಕದ ಹಿರಿಯ ಅಧಿಕಾರಿ ರಷ್ಮಿ ಕರಂದಿಕರ್ ಅವರು ತಿಳಿಸಿದರು.

ಆನ್‌ಲೈನ್ ಶಾಪಿಂಗ್ ವಂಚನೆಯ ಬಗ್ಗೆ ಮಹಿಳೆಯೋರ್ವರು ನೀಡಿದ್ದ ದೂರನ್ನು ಆಧರಿಸಿ ಮುಂಬೈ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು.

ದುಬಾರಿ ಬೆಲೆಯ ಸಿದ್ಧ ಉಡುಪುಗಳನ್ನು ಅತ್ಯಂತ ಕಡಿಮೆ ದರಗಳಲ್ಲಿ ಮಾರಾಟ ಮಾಡುವ ಅಹಿರ್‌ನ ಕೊಡುಗೆ ಹಲವಾರು ಮಹಿಳೆಯರನ್ನು ಆಕರ್ಷಿಸಿತ್ತು. ಜಾಲತಾಣದಲ್ಲಿ ಸಿದ್ಧ ಉಡುಪುಗಳ ವಿತರಣೆಯ ಬಳಿಕ ಹಣ ಪಾವತಿಯ ಆಯ್ಕೆಯಿರಲಿಲ್ಲ ಮತ್ತು ಎಲ್ಲ ಖರೀದಿಗಳಿಗೆ ಪೂರ್ವ ಪಾವತಿಯನ್ನು ಮಾಡಬೇಕಿತ್ತು. ಆದರೆ ಹಣವನ್ನು ಸ್ವೀಕರಿಸಿದ್ದ ಅಹಿರ್ ಗ್ರಾಹಕರು ಸೂಚಿಸಿದ್ದ ಸಿದ್ಧ ಉಡುಪುಗಳನ್ನು ಅವರಿಗೆ ರವಾನಿಸದೆ ವಂಚಿಸಿದ್ದಾನೆ ಎಂದು ಕರಂದಿಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News