ದಿಲ್ಲಿ: ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರ ನಿರುತ್ಸಾಹ

Update: 2021-01-19 16:11 GMT

ಹೊಸದಿಲ್ಲಿ,ಜ.19: ಕೋವಿಡ್-19 ನಿಯಂತ್ರಣ ಲಸಿಕೆ ಅಭಿಯಾನದ ಮೊದಲ ಎರಡು ದಿನಗಳಲ್ಲಿ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿರುವ ಕೇಂದ್ರ ಸರಕಾರದ 6 ಆಸ್ಪತ್ರೆಗಳಲ್ಲಿ ಶೇ.50ಕ್ಕೂ ಕಡಿಮೆ ಸಂಖ್ಯೆಯ ಆರೋಗ್ಯ ಕಾರ್ಯಕರ್ತರು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ಪಡೆದುಕೊಂಡಿದ್ದಾರೆಂದು ವಿವಿಧ ಆಸ್ಪತ್ರೆಗಳು ಹಾಗೂ ಜಿಲ್ಲಾ ಅಧಿಕಾರಿಗಳಿಂದ ಲಭ್ಯವಾದ ದತ್ತಾಂಶಗಳು ಬಹಿರಂಗಪಡಿಸಿವೆ.

1250 ಮಂದಿಗೆ ಕೋವ್ಯಾಕಿನ್ ಲಸಿಕೆಯನ್ನು ನೀಡಲು ಗುರಿಯಿರಿಸಲಾಗಿತ್ತಾದರೂ, ಜನವರಿ 16 ಹಾಗೂ 18ರಂದು ಒಟ್ಟು 551 (ಶೇ.44.08) ಆರೋಗ್ಯ ಕಾರ್ಯಕರ್ತರು ಲಸಿಕೆಯನ್ನು ಪಡೆದುಕೊಂಡಿದ್ದಾರೆ ಈ ಪೈಕಿ 314 ಫಲಾನುಭವಿಗಳು ಲಸಿಕೆ ಅಭಿಯಾನದ ಮೊದಲ ದಿನವಾದ ಶನಿವಾರ ಲಸಿಕೆಯನ್ನು ಪಡೆದುಕೊಂಡಿದ್ದರು. ಆದರೆ ಎರಡನೆ ದಿನವಾದ ಸೋಮವಾರ ಲಸಿಕೆ ಪಡೆದವರ ಸಂಖ್ಯೆ 237ಕ್ಕೆ ಕುಸಿಯಿತು.

 ಕೇಂದ್ರ ಆರೋಗ. ಸಚಿವಾಲಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಗಳ ಪ್ರಕಾರ ಪ್ರತಿಯೊಂದು ಲಸಿಕೆ ನೀಡಿಕೆ ಕೇಂದ್ರವು ದಿನಕ್ಕೆ 100 ಡೋಸ್ ಗಳನ್ನು ನೀಡಬೇಕೆಂಬ ಗುರಿಯನ್ನು ಇರಿಸಿಕೊಳ್ಳಲಾಗಿದ್ದು, ಆರು ಕೇಂದ್ರಗಳಲ್ಲಿ ಎರಡು ದಿನಗಳಲ್ಲಿ 1200ಕ್ಕೂ ಅಧಿಕ ಮಂದಿಗೆ ಕೋವ್ಯಾಕ್ಸಿನ್ ನೀಡುವ ಗುರಿಯಿರಿಸಲಾಗಿತ್ತು.

ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನಗಳ ಪ್ರಕಾರ ಪ್ರತಿಯೊಂದು ಲಸಿಕೆ ಕೇಂದ್ರಕ್ಕೂ ದಿನಕ್ಕೆ 100 ಡೋಸ್ ‌ಗಳ ಗುರಿಯನ್ನು ನಿಗದಿಪಡಿಸಲಾಗಿದ್ದು, ಆದಾಗ್ಯೂ ಕೇಂದ್ರ ಸರಕಾರ ನಡೆಸುವ ಸರಕಾರಿ ಆಸ್ಪತ್ರೆಗಳಲ್ಲೊಂದಾದ ರಾಮಮನೋಹರ ಲೋಹಿಯಾ (ಆರ್‌ಎಂಎಲ್) ಆಸ್ಪತ್ರೆಯು ತನಗೆ ಎರಡನೆ ದಿನದಂದು 150 ಮಂದಿಗೆ ಲಸಿಕೆ ನೀಡುವಂತೆ ಸೂಚಿಸಲಾಗಿದೆಯೆಂದು ತಿಳಿಸಿದೆ.

 ಹೊಸದಿಲ್ಲಿಯಲ್ಲಿನ 81 ಆಸ್ಪತ್ರೆಗಳ ಪೈಕಿ 75 ಆಸ್ಪತ್ರೆಗಳನ್ನು ದಿಲ್ಲಿ ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ನಡೆಸುತ್ತಿವೆ. ಈ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಶೀಲ್ಡ್ ಲಸಿಕೆಯನ್ನು ಆಕ್ಸ್‌ಫರ್ಡ್-ಆಸ್ಟ್ರಾಝೆಂಕಾ ಸಂಶೋಧಿಸಿದ್ದು, ಅದನ್ನು ಭಾರತದಲ್ಲಿ ಸೆರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿದೆ.

ಏಮ್ಸ್, ಆರ್‌ಎಂಎಲ್, ಕಲಾವತಿ ಮಕ್ಕಳ ಆಸ್ಪತ್ರೆ, ಬಸಾಯಿದಾರ್‌ಪುರ ಹಾಗೂ ರೋಹಿಣಿ ಪ್ರದೇಶಗಳ ಇಎಸ್‌ಐ ಈ ಆರು ಕೇಂದ್ರ ಸರಕಾರದ ಮಾಲಕತ್ವದ ಆಸ್ಪತ್ರೆಗಳಲ್ಲಿ ಮಾತ್ರ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News