ಪುದುಚೇರಿ ವಿಧಾನ ಸಭೆಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕಾರ

Update: 2021-01-19 16:26 GMT

ಪುದುಚೇರಿ, ಜ. 19: ಪುದುಚೇರಿ ವಿಧಾನ ಸಭೆಯಲ್ಲಿ ಮಂಗಳವಾರ ನಡೆದ ಕಲಾಪ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ವಿವಾದಾತ್ಮಕ ಕೃಷಿ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕುವ ಹೈಡ್ರಾಮಕ್ಕೆ ಸಾಕ್ಷಿಯಾಯಿತು.

ಅನಂತರ ವಿಧಾನ ಸಭೆಯಲ್ಲಿ ಕೃಷಿ ಕಾಯ್ದೆಗಳನ್ನು ಹಿಂದೆ ತೆಗೆದುಕೊಳ್ಳುವಂತೆ ಆಗ್ರಹಿಸಿ ನಿರ್ಣಯ ಅಂಗೀಕರಿಸಲಾಯಿತು. ಕೇಂದ್ರಾಡಳಿತ ಪ್ರದೇಶದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಸಂಪೂರ್ಣ ರಾಜ್ಯದ ಸ್ಥಾನ ಮಾನ ನೀಡುವಂತೆ ಮರು ಆಗ್ರಹಿಸಿ ಇನ್ನೊಂದು ನಿರ್ಣಯ ಅಂಗೀಕರಿಸಲಾಯಿತು. ಕಾಂಗ್ರೆಸ್‌ನ ಮಿತ್ರ ಪಕ್ಷವಾದ ಡಿಎಂಕೆಯ ಎಲ್ಲ 3 ಸದಸ್ಯರು ಗೈರಾಗಿರುವುದು ಎದ್ದು ಕಾಣುತ್ತಿತ್ತು.

ಧ್ವನಿ ಮತದ ಮೂಲಕ ಎರಡು ನಿರ್ಣಯವನ್ನು ಅಂಗೀಕರಿಸುತ್ತಿರುವಂತೆ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಎಐಎಡಿಎಂಕೆ ಹಾಗೂ ಬಿಜೆಪಿ ಒಳಗೊಂಡ ಎಲ್ಲ ಪ್ರತಿಪಕ್ಷಗಳು ಕಲಾಪ ಬಹಿಷ್ಕರಿಸಿ ಸದನದಿಂದ ಹೊರ ನಡೆದವು. ಕಾಂಗ್ರೆಸ್ ಹಾಗೂ ಡಿಎಂಕೆ ನಡುವಿನ ಸಂಬಂಧ ಹಳಸಿದೆ. ಆದುದರಿಂದ ಸರಕಾರ ತನ್ನ ಬಹುಮತ ಸಾಬೀತುಪಡಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು. ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕರಿಸಿದ ಇತ್ತೀಚೆಗಿನ ರಾಜ್ಯ ಪುದುಚೇರಿ.

ಈ ಹಿಂದೆ ಕೇರಳ, ಪಂಜಾಬ್, ರಾಜಸ್ಥಾನ ಹಾಗೂ ದಿಲ್ಲಿ ಸೇರಿದಂತೆ ಹಲವು ಬಿಜೆಪಿಯೇತರ ಸರಕಾರ ಇರುವ ರಾಜ್ಯಗಳು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News