ಸುಭಾಷ್ ಚಂದ್ರ ಬೋಸ್ ಜನ್ಮ ದಿನ ‘ಪರಾಕ್ರಮ ದಿವಸ್’ ಆಗಿ ಆಚರಣೆ

Update: 2021-01-19 16:30 GMT

ಹೊಸದಿಲ್ಲಿ, ಜ. 19: ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನವಾದ ಜನವರಿ 23 ಅನ್ನು ಪ್ರತಿವರ್ಷ ‘ಪರಾಕ್ರಮ ದಿವಸ್’ ಆಗಿ ಆಚರಿಸಲು ಕೇಂದ್ರ ಸರಕಾರ ಮಂಗಳವಾರ ನಿರ್ಧರಿಸಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧಿಕೃತ ನೋಟಿಸ್ ಹೇಳಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೆ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುವಂತೆ 2020 ಡಿಸೆಂಬರ್ 21ರಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದರು. ಒರಿಸ್ಸಾದ ಕತಕ್‌ನಲ್ಲಿ 1897 ಜನವರಿ 23ರಂದು ನ್ಯಾಯವಾದಿ ಜಾನಕಿನಾಥ್ ಬೋಸ್ ಅವರ ಪುತ್ರನಾಗಿ ಜನಿಸಿದ್ದ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ ಚಳವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸುಭಾಷ್ ಚಂದ್ರ ಬೋಸ್ ಅವರು ಅಝಾದ್ ಹಿಂದ್ ಪೌಜ್ ಎಂಬ ಸೇನೆಯನ್ನು ಕೂಡ ಆರಂಭಿಸಿದ್ದರು. 1945 ಆಗಸ್ಟ್ 18ರಂದು ಚೀನಾದ ತೈಪೈಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು.

2017ರಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರಕಾರ ಸುಭಾಷ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರುವುದನ್ನು ದೃಢಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News