ಕೆಂಪುಕೋಟೆಯಲ್ಲಿ ಸತ್ತುಬಿದ್ದಿದ್ದ ಕಾಗೆಗಳಲ್ಲಿ ಹಕ್ಕಿಜ್ವರ ಸೋಂಕು ಪತ್ತೆ: ಸಾರ್ವಜನಿಕರಿಗೆ ಪ್ರವೇಶ ನಿಷೇಧ

Update: 2021-01-19 16:52 GMT

ಹೊಸದಿಲ್ಲಿ,ಜ.19: ಇಲ್ಲಿಯ ಕೆಂಪುಕೋಟೆಯಲ್ಲಿ ಕೆಲವು ದಿನಗಳ ಹಿಂದೆ ಸತ್ತುಬಿದ್ದಿದ್ದ ಕಾಗೆಗಳು ಹಕ್ಕಿಜ್ವರ ಸೋಂಕಿಗೆ ತುತ್ತಾಗಿದ್ದವು ಎನ್ನುವುದು ದೃಢಪಟ್ಟಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ ಜ.26ರವರೆಗೆ ಈ ಐತಿಹಾಸಿಕ ಸ್ಮಾರಕಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಸುಮಾರು 15 ಕಾಗೆಗಳು ಕೆಂಪುಕೋಟೆಯ ಆವರಣದಲ್ಲಿ ಸತ್ತುಬಿದ್ದಿದ್ದು,ಈ ಪೈಕಿ ಒಂದರ ಸ್ಯಾಂಪಲ್‌ನ್ನು ಪರೀಕ್ಷೆಗಾಗಿ ಜಲಂಧರದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ದಿಲ್ಲಿ ಸರಕಾರದ ಪಶು ಸಂಗೋಪನಾ ಇಲಾಖೆಯ ನಿರ್ದೇಶಕ ರಾಕೇಶ ಸಿಂಗ್ ಅವರು ತಿಳಿಸಿದರು.

 ಶನಿವಾರವಷ್ಟೇ ದಿಲ್ಲಿ ಮೃಗಾಲಯದಲ್ಲಿಯ ಮೃತ ಗೂಬೆಯೊಂದು ಹಕ್ಕಿಜ್ವರ ಸೋಂಕಿಗೆ ಗುರಿಯಾಗಿತ್ತು ಎಂದು ಪರೀಕ್ಷಾ ವರದಿಯು ದೃಢಪಡಿಸಿತ್ತು.

ನಗರದ ಹೊರಗಿನಿಂದ ತರಿಸಲಾದ ಸಂಸ್ಕರಿತ ಮತ್ತು ಪ್ಯಾಕ್ ಮಾಡಲಾದ ಕೋಳಿಮಾಂಸದ ಮಾರಾಟವನ್ನು ಕಳೆದ ವಾರ ನಿಷೇಧಿಸಿದ್ದ ದಿಲ್ಲಿ ಸರಕಾರವು,ಪೂರ್ವ ದಿಲ್ಲಿಯ ಘಾಝಿಪುರ ಕೋಳಿ ಮಾರುಕಟ್ಟೆಯನ್ನು 10 ದಿನಗಳ ಕಾಲ ಮುಚ್ಚುವಂತೆ ಆದೇಶಿಸಿತ್ತು. ಇದಕ್ಕೂ ಮುನ್ನ ದಿಲ್ಲಿಯ ಪಾರ್ಕ್‌ಗಳು ಮತ್ತು ಸರೋವರಗಳಲ್ಲಿಯ ಕಾಗೆಗಳು ಮತ್ತು ಬಾತುಕೋಳಿಗಳ ಸ್ಯಾಂಪಲ್‌ಗಳು ಹಕ್ಕಿಜ್ವರಕ್ಕೆ ಪಾಸಿಟಿವ್ ಆಗಿದ್ದವು.

ಹಕ್ಕಿಜ್ವರ ಹಿನ್ನೆಲೆಯಲ್ಲಿ ಪೌಲ್ಟ್ರಿ ಅಥವಾ ಸಂಸ್ಕರಿತ ಚಿಕನ್‌ನ ಮಾರಾಟ ಮತ್ತು ದಾಸ್ತಾನನ್ನು ದಿಲ್ಲಿಯ ಮಹಾನಗರ ಪಾಲಿಕೆಗಳೂ ತಾತ್ಕಾಲಿಕವಾಗಿ ನಿಷೇಧಿಸಿದ್ದವು. ಆದರೆ ಘಾಜಿಪುರ ಮಾರುಕಟ್ಟೆಯಿಂದ ಸಂಗ್ರಹಿಸಲಾಗಿದ್ದ ನೂರು ಸ್ಯಾಂಪಲ್‌ಗಳಲ್ಲಿ ಹಕ್ಕಿಜ್ವರದ ನೆಗೆಟಿವ್ ವರದಿ ಬಂದ ಬಳಿಕ ಕಳೆದ ಗುರುವಾರ ನಿಷೇಧವನ್ನು ಹಿಂದೆಗೆದುಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News