ಮೀನುಗಾರರ ಬೆವರಿನ ಫಲ ದಕ್ಕುವುದು ಯಾರಿಗೆ?

Update: 2021-01-20 05:41 GMT

ಮಾನ್ಯರೇ,

ಛಾಯಾಗ್ರಹಣ ಅದರ ವಿವಿಧ ಪ್ರಾಕಾರಗಳಿಂದ ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಎಲ್ಲಾ ವರ್ಗದ ಜನರ ಬದುಕನ್ನು ಆವರಿಸಿ ಅನೇಕ ದಶಕಗಳು ದಾಟಿವೆ. ಸಾಮಾನ್ಯ ಮದುವೆ, ಸಭೆ, ಸಮಾರಂಭ, ನಾಟಕ, ಯಕ್ಷಗಾನಗಳಿಂದ ಪ್ರಾರಂಭಿಸಿ, ಕ್ರಿಕೆಟ್, ಟೆನಿಸ್ ಮತ್ತಿತರ ಕ್ರೀಡಾಕೂಟಗಳ ಚಿತ್ರೀಕರಣ ನಿರಂತರವಾಗಿ ಜನರ ಮುಂದೆ ಬಿಂಬಿಸಲ್ಪಡುತ್ತಲೇ ಇವೆ. ಅತ್ಯಂತ ಜಟಿಲವಾದ ಪರ್ವತಾರೋಹಣವೂ ಡ್ರೋನ್ ಮೂಲಕ ಚಿತ್ರೀಕರಣಗೊಳ್ಳಲ್ಪಡುತ್ತಿದೆ. ಆದರೆ ಮೀನುಗಾರರು ಆಳ ಸಮುದ್ರದಲ್ಲಿ ತಮ್ಮ ಜೀವಗಳ ಹಂಗನ್ನೇ ತೊರೆದು ರಾತ್ರಿ-ಹಗಲುಗಳ ಭೇದವಿಲ್ಲದೆ ನಡೆಸುವ ಬಗೆಬಗೆಯ ದೈಹಿಕ ಕಸರತ್ತುಗಳನ್ನೊಳಗೊಂಡ ಅಪಾಯಕಾರಿ ದುಡಿಮೆಯ ಚಿತ್ರೀಕರಣ ನಮಗೆ ದೃಶ್ಯ ಮಾಧ್ಯಮಗಳಲ್ಲಿ ಕಾಣಲು ಸಾಧ್ಯವಾಗಿದೆಯೇ?

ಅನಿಶ್ಚಿತತೆ, ಅಸುರಕ್ಷಿತತೆ ಮತ್ತು ಭಯಗ್ರಸ್ತತೆಯ ಜಾಲದಲ್ಲಿ ತೊಳಲಾಡುತ್ತ ಈ ಮೀನುಗಾರರು ತಮ್ಮಿಳಗೆ ಧೈರ್ಯ ತುಂಬಿಸಿಕೊಳ್ಳಲು ಅನಿವಾರ್ಯವಾಗಿ ದೈವ, ದೇವರು ಮತ್ತು ಧಾರ್ಮಿಕ ವಿಧಿಗಳತ್ತ ತಲೆಹಾಕುತ್ತಾರೆ. ಹೊಟ್ಟೆಗೂ ಸರಿಯಾಗಿ ಉಣ್ಣದೆ, ತಮ್ಮ ಸಂಪಾದನೆಯ ಅತಿ ದೊಡ್ಡ ಪಾಲನ್ನು ಪುರೋಹಿತಶಾಹಿ ಬ್ರಾಹ್ಮಣರ ಪದತಲಕ್ಕೆ ಸುರಿಯುತ್ತಾರೆ. ಬ್ರಾಹ್ಮಣರಾದರೋ ಮೀನು ತಾಮಸ ಆಹಾರವೆಂದು ಘಂಟಾಘೋಷವಾಗಿ ಸಾರುತ್ತಾರೆ. ವಾರದ ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ, ಸಂಕಷ್ಟ ಚೌತಿ, ಪಂಚಮಿ, ಷಷ್ಠಿ, ಏಕಾದಶಿ, ಸಂಕ್ರಾಂತಿ ಮತ್ತು ವರ್ಷದ ಇನ್ನೊಂದಷ್ಟು ದಿನಗಳಲ್ಲಿ, ಗ್ರಾಮದ ದೇವಸ್ಥಾನ, ಭಜನಾ ಮಂದಿರಗಳ ಉತ್ಸವಾಚರಣೆಯ ದಿನಗಳಲ್ಲಿ, ಕೆಲವೊಮ್ಮೆ ಕನಿಷ್ಠ ವಾರದಷ್ಟು ಕಾಲ ಮೀನು ತಿನ್ನಲೇಬಾರದೆಂದು ಕಟ್ಟಪ್ಪಣೆ ಮಾಡುತ್ತಾ, ಮೀನುಗಾರರ ಬೆವರು, ರಕ್ತ, ಜೀವಗಳನ್ನು ನುಂಗುವ ಕಾಯಕದ ಫಲವನ್ನು, ಸಂಪತ್ತಿನ ರೂಪದಲ್ಲಿ ಲೀಲಾಜಾಲವಾಗಿ ನುಂಗುತ್ತಾರೆ. ಇಂತಹ ವಿದ್ಯಮಾನ ಪ್ರಪಂಚದಲ್ಲಿ ಯಾವ ದೇಶದಲ್ಲಾದರೂ ಕಾಣಲು ಸಿಕ್ಕೀತೆ? ದುಡಿಯುತ್ತಿರುವ ಮೀನುಗಾರ ಸಮುದಾಯಕ್ಕೆ ಇವತ್ತು ಅತ್ಯಗತ್ಯವಾಗಿರುವುದು ಪರಿಣತ ಮನಃಶಾಸ್ತ್ರಜ್ಞರ ನಿರಂತರ ಸಲಹಾ ಶುಶ್ರೂಷೆಯೇ ಹೊರತು ಪುರೋಹಿತರ ಮಂತ್ರೋನ್ಮಾದವಲ್ಲ.

-ಅಂತ್ಯಜ, ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News