ಒಂದೂವರೆ ವರ್ಷ ಕೃಷಿ ಕಾಯ್ದೆಗಳನ್ನು ತಡೆಹಿಡಿಯಲು ಕೇಂದ್ರ ಸರಕಾರ ಸಿದ್ಧತೆ

Update: 2021-01-20 18:47 GMT

ಹೊಸದಿಲ್ಲಿ, ಜ. 20: ಕೇಂದ್ರ ಸರಕಾರ ಹಾಗೂ ರೈತ ನಾಯಕರ ನಡುವೆ ಬುಧವಾರ ನಡೆದ 10ನೇ ಸುತ್ತಿನ ಮಾತುಕತೆಯಲ್ಲಿ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳ ಕಾಲ ತಡೆಹಿಡಿಯಲು ಹಾಗೂ ಅದನ್ನು ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಲು ಸಿದ್ಧವಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಆದರೆ, ಕೇಂದ್ರ ಸರಕಾರದ ಈ ಪ್ರಸ್ತಾವವನ್ನು ರೈತ ನಾಯಕರು ತಕ್ಷಣ ಒಪ್ಪಿಕೊಂಡಿಲ್ಲ. ಆಂತರಿಕ ಸಮಾಲೋಚನೆಗಳನ್ನು ನಡೆಸಿದ ಬಳಿಕ ಪ್ರತಿಭಟನೆ ಹಿಂದೆಗೆದುಕೊಳ್ಳುವ ಬಗ್ಗೆ ನಿರ್ಧರಿಸುವುದಾಗಿ ಅವರು ತಿಳಿಸಿದ್ದಾರೆ.

ಮುಂದಿನ ಸುತ್ತಿನ ಮಾತುಕತೆಯನ್ನು ಜನವರಿ 22ಕ್ಕೆ ನಿಗದಿಪಡಿಸಲಾಗಿದೆ.

‘‘ಚರ್ಚೆಯ ಸಂದರ್ಭ, ಕೃಷಿ ಕಾಯ್ದೆಗಳನ್ನು ಒಂದು ಅಥವಾ ಒಂದೂವರೆ ವರ್ಷ ತಡೆ ಹಿಡಿಯಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ನಾವು ಹೇಳಿದೆವು. ಇದನ್ನು ರೈತರ ಒಕ್ಕೂಟ ಗಂಭೀರವಾಗಿ ಪರಿಗಣಿಸಿರುವುದು ನನಗೆ ಸಂತಸ ಉಂಟು ಮಾಡಿದೆ. ಅವರು ಈ ಬಗ್ಗೆ ನಾಳೆ ಪರಿಶೀಲನೆ ನಡೆಸಲಿದ್ದಾರೆ ಹಾಗೂ ತಮ್ಮ ನಿರ್ಧಾರವನ್ನು ಜನವರಿ 22ರಂದು ತಿಳಿಸಲಿದ್ದಾರೆ’’ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸಭೆಯ ಬಳಿಕ ತಿಳಿಸಿದರು.

ಸಭೆಯ ಸಂದರ್ಭ ರೈತ ನಾಯಕರು ಕೆಲವು ರೈತರಿಗೆ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ನೋಟಿಸು ಜಾರಿ ಮಾಡಿರುವ ಬಗ್ಗೆ ಪ್ರಶ್ನೆ ಎತ್ತಿದರು. ಪ್ರತಿಭಟನೆಗೆ ಬೆಂಬಲಿಸುವವರಿಗೆ ಕಿರುಕುಳ ನೀಡುವ ಉದ್ದೇಶದಿಂದ ನೋಟಿಸು ಜಾರಿ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಇದಕ್ಕೆ ಕೇಂದ್ರ ಸರಕಾರದ ಪ್ರತಿನಿಧಿಗಳು, ಈ ವಿಷಯದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

‘‘10ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರಕಾರ ಹೊಸ ಪ್ರಸ್ತಾವವನ್ನು ನಮ್ಮ ಮುಂದಿರಿಸಿದೆ. ಮೂರು ಕೃಷಿ ಕಾಯ್ದೆಗಳ ಹಿಂದೆಗೆತ ಸೇರಿದಂತೆ ನಮ್ಮ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಲು ವಿಶೇಷ ಸಮಿತಿ ರೂಪಿಸಲು ಸಿದ್ಧವಿದೆ ಎಂದು ಅದು ಹೇಳಿದೆ’’ ಎಂದು ಆಲ್ ಇಂಡಿಯಾ ಕಿಸಾನ್ ಸಭಾದ ಬಾಲ್‌ಕಿಷನ್ ಸಿಂಗ್ ಬ್ರಾರ್ ತಿಳಿಸಿದ್ದಾರೆ.

ಸಮಿತಿ ಸಂಪೂರ್ಣವಾಗಿ ಪರಿಶೀಲಿಸುವ ವರೆಗೆ ಎಲ್ಲಾ ನೂತನ ಮೂರು ಕಾಯ್ದೆಗಳನ್ನು ಒಂದೂವರೆ ವರ್ಷ ತಡೆ ಹಿಡಿಯಲಾಗುವುದು ಎಂದು ಕೇಂದ್ರ ಸರಕಾರ ಪ್ರಸ್ತಾವ ಮುಂದಿರಿಸಿದೆ ಎಂದು ಅವರು ತಿಳಿಸಿದ್ದಾರೆ.

ಇಂದಿನ ಸಭೆಯಲ್ಲಿ ಕೇಂದ್ರ ಸರಕಾರದ ಪ್ರಸ್ತಾವವನ್ನು ನಾವು ಒಪ್ಪಿಕೊಂಡಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂದೆಗೆಯುವ ನಮ್ಮ ಬೇಡಿಕೆಗೆ ನಾವು ಈಗಲೂ ಬದ್ಧರಾಗಿದ್ದೇವೆ ಎಂದು ಬಾಲ್‌ಕಿಷನ್ ಸಿಂಗ್ ಬ್ರಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News