“ಯಾವುದಾದರೊಂದು ವಿಧದಲ್ಲಿ ಮರಳುತ್ತೇನೆ”: ಶ್ವೇತಭವನವನ್ನು ತೊರೆದ ಟ್ರಂಪ್

Update: 2021-01-20 16:35 GMT

ವಾಶಿಂಗ್ಟನ್, ಜ. 20: ನಾನು ಯಾವುದಾದರೂ ಒಂದು ವಿಧದಲ್ಲಿ ಮರಳುತ್ತೇನೆ ಎಂದು ಅವೆುರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಹೇಳಿದ್ದಾರೆ. ತನ್ನ ಅಧಿಕಾರಾವಧಿಯ ಕೊನೆಯ ದಿನ ಉತ್ತರಾಧಿಕಾರಿ ಜೋ ಬೈಡನ್ ಅಧಿಕಾರ ಸ್ವೀಕರಿಸುವ ಮುನ್ನ ಫ್ಲೋರಿಡಕ್ಕೆ ಹೋಗಲು ಏರ್ ಫೋರ್ಸ್ ವನ್ ವಿಮಾನವನ್ನು ಹತ್ತುವ ಮೊದಲು ಟ್ರಂಪ್ ಈ ಮಾತುಗಳನ್ನು ಹೇಳಿದರು.

‘‘ಈ ನಾಲ್ಕು ವರ್ಷಗಳು ಅಮೋಘವಾಗಿದ್ದವು’’ ಎಂದು ವಾಶಿಂಗ್ಟನ್‌ನ ಜಾಯಿಂಟ್ ಬೇಸ್ ಆ್ಯಂಡ್ರೂಸ್‌ನಲ್ಲಿ ಸೇರಿದ ತನ್ನ ಸಿಬ್ಬಂದಿ, ಬೆಂಬಲಿಗರು ಮತ್ತು ಕುಟುಂಬ ಸದಸ್ಯರನ್ನು ಉದ್ದೇಶಿಸಿ ಮಾಡಿದ ಕಿರುಭಾಷಣದಲ್ಲಿ ಟ್ರಂಪ್ ಹೇಳಿದರು.

‘‘ನಾವು ಜೊತೆಯಾಗಿ ಅಮೋಘ ಕೆಲಸಗಳನ್ನು ಮಾಡಿದ್ದೇವೆ. ನಾವು ನಿಮಗಾಗಿ ಎಂದೆಂದಿಗೂ ಹೋರಾಡುತ್ತೇನೆ. ನಾವು ಯಾವುದಾದರೂ ಒಂದು ವಿಧದಲ್ಲಿ ವಾಪಸ್ ಬರುತ್ತೇವೆ’’ ಎಂದರು.

ಪ್ರಮಾಣವಚನ ಕಾರ್ಯಕ್ರಮ ಬಹಿಷ್ಕರಿಸಿದ ಟ್ರಂಪ್

ಹೊಸ ಸರಕಾರಕ್ಕೆ ನಾನು ಯಶಸ್ಸು ಮತ್ತು ಶುಭ ಕೋರುವೆ ಎಂದು ಡೊನಾಲ್ಡ್ ಟ್ರಂಪ್ ಇದೇ ಸಂದರ್ಭದಲ್ಲಿ ಹೇಳಿದರು. ಆದರೆ, ಅವರು ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಹೆಸರು ಹೇಳಲಿಲ್ಲ.

150ಕ್ಕೂ ಅಧಿಕ ವರ್ಷದ ಇತಿಹಾಸದಲ್ಲಿ, ತನ್ನ ಉತ್ತರಾಧಿಕಾರಿಯ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಮೊದಲ ಅಧ್ಯಕ್ಷ ಟ್ರಂಪ್ ಆಗಿದ್ದಾರೆ.

ಶ್ವೇತಭವನ ತೊರೆದ ಟ್ರಂಪ್

ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಶ್ವೇತಭವನವನ್ನು ತೊರೆದಿದ್ದಾರೆ.

ಇದರೊಂದಿಗೆ, ಅಮೆರಿಕದ ಆಧುನಿಕ ಇತಿಹಾಸದಲ್ಲೇ ಅತ್ಯಂತ ವಿಪ್ಲವಕಾರಿ ಅಧ್ಯಕ್ಷೀಯ ಯುಗವೊಂದಕ್ಕೆ ತೆರೆ ಬಿದ್ದಿದೆ.

ಬೆಳಗ್ಗೆ 8:15 ಸುಮಾರಿಗೆ 74 ವರ್ಷದ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಶ್ವೇತಭವನದ ಕೆಂಪು ಹಾಸಿನಲ್ಲಿ ನಡೆಯುತ್ತಾ ಅಲ್ಲಿ ನೆರೆದಿದ್ದ ಸಣ್ಣ ಗುಂಪಿನತ್ತ ಕೈಬೀಸಿದರು.

ಬಳಿಕ, ಮರೀನ್ ವನ್ ಹೆಲಿಕಾಪ್ಟರ್ ಹತ್ತಿ ವಾಶಿಂಗ್ಟನ್‌ನ ಹೊರವಲಯದಲ್ಲಿರುವ ವಾಯುನೆಲೆಗೆ ಪ್ರಯಾಣಿಸಿದರು. ಅಲ್ಲಿ ಏರ್ ಫೋರ್ಸ್ ವನ್ ವಿಮಾನವನ್ನು ಹತ್ತಿ ಫ್ಲೋರಿಡಕ್ಕೆ ತೆರಳಿದರು.

ಅಮೆರಿಕ ಸಂಸತ್ತಿನ ವೆಸ್ಟರ್ನ್ ಫ್ರಂಟ್‌ನಲ್ಲಿ ಬುಧವಾರ ನಡು ಮಧ್ಯಾಹ್ನ ಜೋ ಬೈಡನ್ ಅಮೆರಿಕದ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವಾಗ ಟ್ರಂಪ್ ಫ್ಲೋರಿಡದಲ್ಲಿರುವ ತನ್ನ ಮಾರ್-ಅ-ಲಾಗೊ ರಿಸಾರ್ಟ್‌ನಲ್ಲಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News