'ತಾಂಡವ್' ನಂತರ ಈಗ 'ಮಿರ್ಝಾಪುರ್' ಸಮಸ್ಯೆ: ಸುಪ್ರೀಂ ಕೋರ್ಟ್‍ನಿಂದ ನೋಟಿಸ್

Update: 2021-01-21 09:56 GMT

ಹೊಸದಿಲ್ಲಿ: ಅಮೆಝಾನ್ ಪ್ರೈಮ್ ವೆಬ್ ಸರಣಿ 'ತಾಂಡವ್' ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪವನ್ನು ಅದಾಗಲೇ ಎದುರಿಸುತ್ತಿರುವಂತೆಯೇ ಇನ್ನೊಂದು ವೆಬ್ ಸರಣಿ 'ಮಿರ್ಝಾಪುರ್' ಕೂಡ ಅಂತಹುದೇ ಸಮಸ್ಯೆಗೆ ತುತ್ತಾಗಿದೆ. ಈ ವೆಬ್ ಸರಣಿ ಉತ್ತರ ಪ್ರದೇಶದ ಗೌರವಕ್ಕೆ ಧಕ್ಕೆ ತಂದಿದೆ ಎಂದು ಮಿರ್ಝಾಪುರ್ ನ ಪತ್ರಕರ್ತರೊಬ್ಬರು ಪ್ರಕರಣ ದಾಖಲಿಸಿದ ಬೆನ್ನಿಗೆ ಉತ್ತರ ಪ್ರದೇಶ ಪೊಲೀಸರ ಒಂದು ತಂಡ ಮುಂಬೈಗೆ ತನಿಖೆಗೆ ಆಗಮಿಸಿದೆ. ಅದೇ ನಗರದ ಇನ್ನೊಬ್ಬ ನಿವಾಸಿ ದಾಖಲಿಸಿದ ಅಪೀಲನ್ನು ಇಂದು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಸರಣಿಯ ನಿರ್ಮಾಪಕರು ಹಾಗೂ ಅಮೆಝಾನ್ ಪ್ರೈಮ್‍ಗೆ ನೋಟಿಸ್ ಜಾರಿಗೊಳಿಸಿದೆ.

ಈ ವೆಬ್ ಸರಣಿಯಲ್ಲಿ ಮಿರ್ಝಾಪುರ್ ಪಟ್ಟಣವನ್ನು ಕೆಟ್ಟ ದೃಷ್ಟಿಯಲ್ಲಿ ಹಾಗೂ ಅದೊಂದು ಉಗ್ರ ಮತ್ತು ಅಕ್ರಮ ಚಟುವಟಿಕೆಗಳ ತಾಣ ಎಂಬಂತೆ ಬಿಂಬಿಸಲಾಗಿದೆ ಎಂದು ಎಸ್ ಕೆ ಕುಮಾರ್ ಎಂಬವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಪೀಲಿನಲ್ಲಿ ತಿಳಿಸಿದ್ದಾರೆ.

ಅತ್ತ ಪತ್ರಕರ್ತ ಹಾಗೂ ಲೇಖಕ ಅರವಿಂದ್ ಚತುರ್ವೇದಿ ಅವರು ದಾಖಲಿಸಿದ್ದ ದೂರಿನಲ್ಲಿ ಈ ವೆಬ್ ಸರಣಿ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಹಾಗೂ ತಮ್ಮ ಜಿಲ್ಲೆಯನ್ನು ಕೆಟ್ಟದಾಗಿ ಬಿಂಬಿಸಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News