ಮುಂಬೈ ರಾತ್ರಿ ಶಾಲೆಗಳ ನಕ್ಷತ್ರಗಳು

Update: 2021-01-21 19:30 GMT

ಮುಂಬೈ ಕನಸಿನ ಲೋಕವನ್ನು ಸೇರಿದ ಅವಿಭಜಿತ ದಕ್ಷಿಣ ಕನ್ನಡದ ಬಹಳಷ್ಟು ಎಳೆಯರು ಪ್ರಾರಂಭದಲ್ಲಿ ಹೊಟೇಲ್/ಕ್ಯಾಂಟಿನ್ ಮಾಣಿಗಳಾಗಿ ಸೇರಿಕೊಂಡವರು. ಅಂದಿನ ಶಿಕ್ಷಣ ಪ್ರೇಮಿ, ಭಾಷಾ ಪ್ರೇಮಿಗಳಾಗಿದ್ದ ಹೊಟೇಲ್ ಸೇಠ್‌ಗಳು ತಮ್ಮಲ್ಲಿ ದುಡಿಯುತ್ತಿದ್ದ, ಶಿಕ್ಷಣ ವಂಚಿತ ಮಕ್ಕಳನ್ನು ಸಮಯದಲ್ಲಿ ರಿಯಾಯಿತಿ ನೀಡಿ, ರಾತ್ರಿ ಶಾಲೆಗಳಿಗೆ ಹೋಗುವಂತೆ ಮಾಡಿ ಶಿಕ್ಷಣವನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ಕಠಿಣ ಪರಿಶ್ರಮ ವಹಿಸಿ ಮಕ್ಕಳು ರಾತ್ರಿ ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಮುಂದೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಹೆಸರು, ಗೈದ ಸಾಧನೆ ಅನುಪಮ, ಅನುಕರಣೀಯ.


ಮುಂಬೈ ಮಹಾನಗರದಲ್ಲಿನ ಕನ್ನಡ ರಾತ್ರಿ ಶಾಲೆಗಳು ಸಕ್ರಿಯವಾಗಿದ್ದದ್ದಕ್ಕೆ (90ರ ದಶಕದವರೆಗೆ) ಅಲ್ಲಿನ ಹೊಟೇಲುಗಳ/ಕ್ಯಾಂಟಿನ್‌ಗಳ ಪಾತ್ರ ಮಹತ್ವದ್ದು. ಕೇಳಿ ಓದಿ ಆಶ್ಚರ್ಯ ಪಡಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ ಕನಸಿನ ಲೋಕವನ್ನು ಸೇರಿದ ಅವಿಭಜಿತ ದಕ್ಷಿಣ ಕನ್ನಡದ ಬಹಳಷ್ಟು ಎಳೆಯರು ಪ್ರಾರಂಭದಲ್ಲಿ ಹೊಟೇಲ್/ಕ್ಯಾಂಟಿನ್ ಮಾಣಿಗಳಾಗಿ ಸೇರಿಕೊಂಡವರು. ಅಂದಿನ ಶಿಕ್ಷಣ ಪ್ರೇಮಿ, ಭಾಷಾ ಪ್ರೇಮಿಗಳಾಗಿದ್ದ ಹೊಟೇಲ್ ಸೇಠ್‌ಗಳು ತಮ್ಮಲ್ಲಿ ದುಡಿಯುತ್ತಿದ್ದ, ಶಿಕ್ಷಣ ವಂಚಿತ ಮಕ್ಕಳನ್ನು ಸಮಯದಲ್ಲಿ ರಿಯಾಯಿತಿ ನೀಡಿ, ರಾತ್ರಿ ಶಾಲೆಗಳಿಗೆ ಹೋಗುವಂತೆ ಮಾಡಿ ಶಿಕ್ಷಣವನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ಕಠಿಣ ಪರಿಶ್ರಮ ವಹಿಸಿ ಮಕ್ಕಳು ರಾತ್ರಿ ಶಾಲೆಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿ ಮುಂದೆ ವಿವಿಧ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಹೆಸರು, ಗೈದ ಸಾಧನೆ ಅನುಪಮ, ಅನುಕರಣೀಯ.

ಆ ರಾತ್ರಿ ಶಾಲೆಗಳಿಂದ ಹೊರಬಂದು ವಿದ್ಯಾರ್ಥಿಗಳು ಕಟ್ಟಿದ ಆಯಾ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಟನೆಗಳ ಒಂದು ಸೂಕ್ಷ್ಮ ಅವಲೋಕನದ ಅವಶ್ಯಕತೆ ಇಂದು ಇದೆ. ಕಳೆದ ಶತಮಾನದ ಅಂತ್ಯದವರೆಗೆ ಮುಂಬೈಯ ಹೃದಯ ಭಾಗ ಕೋಟೆ ಪರಿಸರದಲ್ಲಿ ಕೈಯಲ್ಲಿ ಬರೆದ ಪತ್ರಗಳು, ಬಿತ್ತಿ ಬರಹಗಳು ಅಥವಾ ಡಿ.ಎನ್.ರೋಡ್, ಫೌಂಟನ್‌ನ ನಾಲ್ಕು ರಸ್ತೆ ಕೂಡುವಲ್ಲಿ, ಯುನಿವರ್ಸಿಟಿಯ ಎದುರಿಗಿರುವ ಮಂಗಳೂರು ಮೈದಾನಿನ ಸೀಳು ರಸ್ತೆ, ಆಕಾಶವಾಣಿ ಎದುರಿನ ರಸ್ತೆ, ಚರ್ಚ್‌ಗೇಟ್‌ನಿಂದ ನರಿಮನ್ ಪಾಂಟ್‌ಗೆ ಹೋಗುವ ರಸ್ತೆ-ಮೊದಲಾದ ರಸ್ತೆಗಳ ಮಧ್ಯೆ ಬಿಳಿ ಬಣ್ಣದಲ್ಲಿ ದಪ್ಪ ಅಕ್ಷರಗಳಲ್ಲಿ ವಿದ್ಯಾವಂಚಿತರನ್ನು ಶಾಲೆಗಳಿಗೆ ಸೇರುವಂತೆ ಪ್ರಚೋದಿಸುವ ಬರಹಗಳು; ಆ ಶಾಲೆಗಳ ವೈಶಿಷ್ಟತೆ, ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಟನೆಗಳಿಂದ ದೊರಕುವ ಸೌಲಭ್ಯ-ಹೀಗೆ ಹತ್ತು ಹಲವು ವಿಷಯಗಳ ಈ ಬಿತ್ತಿ ಬರಹ ಮತ್ತು ಮಾರ್ಗ ಬರಹಗಳು ಸುಮಾರು ಎಪ್ರಿಲ್-ಮೇ-ಜೂನ್ ತಿಂಗಳುಗಳಲ್ಲಿ ವಿರಾಜಿಸುತ್ತಿದ್ದವು.

ಈ ಬರಹ ಅಥವಾ ಕರಪತ್ರಗಳ ಹಿಂದೆ ಕೆಲಸ ಮಾಡುತ್ತಿದ್ದವರು ರಾತ್ರಿ ಶಾಲೆಗಳ ಹಳೆ ವಿದ್ಯಾರ್ಥಿಗಳು. ಅದು ಮದರ್ ಇಂಡಿಯಾ ಧರ್ಮಾರ್ಥ ರಾತ್ರಿ ಶಾಲೆ ಇರಬಹುದು, ಬಾಂಬೆ ಫೋರ್ಟ್ ರಾತ್ರಿ ಶಾಲೆ ಇರಬಹುದು ಅಥವಾ ಗುರುನಾರಾಯಣ ರಾತ್ರಿ ಶಾಲೆ ಇರಬಹುದು ಅಥವಾ ಇನ್ಯಾವುದೇ ರಾತ್ರಿ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘಟನೆಗಳಿರಬಹುದು. ಇದಿಷ್ಟೇ ಆಗಿದ್ದಿದ್ದರೆ ಅದರಲ್ಲಿ ವಿಶೇಷತೆ ಇಲ್ಲ. ಬಿತ್ತಿ ಬರಹ ಎಲ್ಲಾ ಆದನಂತರ ಕೋಟೆ, ನರಿಮನ್ ಪಾಂಟ್, ಚರ್ಚ್‌ಗೇಟ್, ಬಲಾರ್ಡ್‌ಪಿಯರ್, ಕೊಲಾಬ ಮೊದಲಾದ ಕಡೆ ಇದ್ದ ಹೊಟೇಲ್, ಕ್ಯಾಂಟಿನ್, ಟೈಲರಿಂಗ್ ಅಂಗಡಿಗಳನ್ನು ಹುಡುಕಿ ಅಲ್ಲಿನ ಸೇಠ್‌ಗಳನ್ನು ಭೇಟಿಯಾಗಿ ಅವರಿಗೆ ಶಿಕ್ಷಣದ ಮಹತ್ವ ತಿಳಿಹೇಳಿ, ಅಲ್ಲಿನ ಮಾಣಿಗಳೊಂದಿಗೆ ಮಾತನಾಡಿ, ಅವರನ್ನು ಶಾಲೆಗೆ ಬರಮಾಡುವಂತೆ ಮನ ಒಲಿಸುವುದೇ ಒಂದು ಸಾಹಸ ಗಾಥೆ. ಶಾಲೆ ಪ್ರಾರಂಭಗೊಂಡೊಡನೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ಕೂಲ್ ಬ್ಯಾಗ್, ಪಠ್ಯ ಹಾಗೂ ಪಠ್ಯೇತರ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪುಕ್ಕಟೆಯಾಗಿ ನೀಡುವುದು, ಜತೆಗೆ ಕೆಲವೊಂದು ರಾತ್ರಿಶಾಲೆಗಳಲ್ಲಿ ಸಾಂಕೇತಿಕ ಶುಲ್ಕ ಇದ್ದರೆ ಅಸಹಾಯಕ ವಿದ್ಯಾರ್ಥಿಗಳ ಆ ಶುಲ್ಕವನ್ನು ಹಳೆ ವಿದ್ಯಾರ್ಥಿಗಳು ಕಟ್ಟುತ್ತಿದ್ದರು. ಉಪನಗರಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳ ರೈಲು ಪಾಸಿನ ಜವಾಬ್ದಾರಿಯನ್ನು ಕೆಲವೊಂದು ಹಳೆವಿದ್ಯಾರ್ಥಿ ಸಂಘಟನೆಗಳು ಹೊತ್ತುಕೊಳ್ಳುತ್ತಿದ್ದವು.

ಶಾಲೆಯ ಆಡಳಿತ ವರ್ಗ ಹಾಗೂ ಅಧ್ಯಾಪಕ ವೃಂದದೊಂದಿಗೆ ಸದಾ ನಿಕಟ ಸಂಬಂಧ ಇರಿಸಿಕೊಂಡಿ ರುವ ಹಳೆ ವಿದ್ಯಾರ್ಥಿ ಸಂಘಟನೆಗಳು ಅಧ್ಯಾಪಕರ ಜಾಗದಲ್ಲಿ ನಿಂತು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಕೆಲಸ ಮಾಡುತ್ತಿದ್ದವು. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಅಧ್ಯಾಪಕರ ಗೈರು ಹಾಜರಿ ಕಂಡಲ್ಲಿ ಅಂದು ಅಂತಹ ತರಗತಿಗಳಿಗೆ ಹಳೆ ವಿದ್ಯಾರ್ಥಿಗಳ ಸದಸ್ಯರು ಅಂದಿನ ಆ ಜಾಗವನ್ನು ತುಂಬುತ್ತಿದ್ದರು. ವಿದ್ಯಾರ್ಥಿಗಳು ಯಾರಾದರೂ ಹಲವಾರು ದಿನಗಳಿಂದ ಗೈರು ಹಾಜರಾದಲ್ಲಿ ಅವರ ಹೊಟೇಲ್/ ಕ್ಯಾಂಟಿನ್ ಅಥವಾ ಮನೆಯ ವಿಳಾಸ ಪಡೆದು ಅವರನ್ನು, ಅವರ ಸೇಠ್ ಅಥವಾ ಪಾಲಕರನ್ನು ವಿಚಾರಿಸಿ, ಒತ್ತಾಯಿಸಿ ಅವರು ಪುನಃ ಶಾಲೆಗೆ ಬರುವಂತೆ ಮಾಡುತ್ತಿದ್ದ ಕೀರ್ತಿಯು ಈ ಸಂಘಟನೆಗಳದ್ದು.

ಕೋಟೆ ಪರಿಸರದಲ್ಲೇ ಹತ್ತಕ್ಕಿಂತ ಹೆಚ್ಚು ರಾತ್ರಿ ಶಾಲೆಗಳಿದ್ದ ಸಂದರ್ಭ ಅದು. ದಿನದಲ್ಲಿ ದುಡಿದು, ರಾತ್ರಿ ಶಾಲೆಗೆ ಹೋಗಿ ಕೆಲವರು ಊಟ ಮಾಡಿ ರಸ್ತೆ ಬದಿಯ ಬೀದಿ ದೀಪದ ಅಡಿಯಲ್ಲಿ ಕುಳಿತು ಅಥವಾ ಯೂನಿವರ್ಸಿಟಿಯ ಕಟ್ಟಡದ ಎದುರಿಗೆ (ಬಾಬರಿ ಮಸೀದಿ ಧ್ವಂಸದ ತನಕ), ಡೌನ್‌ಹಾಲ್‌ನ ಮೆಟ್ಟಿಲುಗಳಲ್ಲಿ, ಕೆಲವರು ಹಾರ್ನಿಮನ್ ಸರ್ಕಲ್‌ನಲ್ಲಿ ಕುಳಿತು ಅಭ್ಯಾಸ ಮಾಡುತ್ತಿದ್ದರು. ಆ ವಿದ್ಯಾರ್ಥಿಗಳ ಕಷ್ಟ ಸುಖಗಳಿಗೆ ಹಳೆ ವಿದ್ಯಾರ್ಥಿಗಳು ಸ್ಪಂದಿಸುತ್ತಿದ್ದ ರೀತಿ ಸ್ಮರಣೀಯ. ರಾತ್ರಿ ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸುವ, ಪ್ರೋತ್ಸಾಹಿಸುವ ಕಾರ್ಯವನ್ನು ಹಳೆವಿದ್ಯಾರ್ಥಿಗಳು ನಿರಂತರ ಮಾಡುತ್ತಾ ಬಂದಿದ್ದಾರೆ. ಅಂದಿನ ದಿನಗಳಲ್ಲಿ ಜುಲೈಯಿಂದ ಮೊದಲ್ಗೊಂಡು ಫೆಬ್ರವರಿವರೆಗೆ ಪ್ರತಿ ಆದಿತ್ಯವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ರಾತ್ರಿ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಟನೆಗಳು ಮಾಡುತ್ತಿದ್ದವು.

ಆಯಾ ಶಾಲೆಯ ಮಕ್ಕಳಿಗೆ ಆಯಾ ಶಾಲೆಯ ಹಳೆವಿದ್ಯಾರ್ಥಿ ಸಂಘಟನೆಯ ಸದಸ್ಯರು ಭಾಷಣ, ಭಾವಗೀತೆ, ಜಾನಪದ, ಚಲನಚಿತ್ರ ಗೀತೆ, ಏಕಪಾತ್ರಾಭಿನಯ, ಛದ್ಮವೇಷ, ಕಿರುನಾಟಕ, ರಸಪ್ರಶ್ನೆ ಮೊದಲಾದ ವಿಷಯಗಳಿಗೆ ವಿದ್ಯಾರ್ಥಿಗಳನ್ನು ತಾವು ಸ್ವತಃ ಅಥವಾ ಪರಿಣಿತರನ್ನು ಕರೆಸಿ ತಮ್ಮ ತಮ್ಮ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಸಜ್ಜುಗೊಳಿಸುತ್ತಿದ್ದರು. ಇದರಿಂದ ಹಗಲು ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ಈ ವಿದ್ಯಾರ್ಥಿಗಳು ಗೆದ್ದು ಬರುತ್ತಿದ್ದುದು ಮಾತ್ರವಲ್ಲದೆ ಅಕ್ಕಲ್‌ಕೋಟ್, ಸೋಲಪುರ್ ಮೊದಲಾದ ಗಡಿನಾಡು ಪ್ರದೇಶಗಳಿಗೂ ಹೋಗಿ ಅಲ್ಲಿ ಜರಗುತ್ತಿದ್ದ ಸ್ಪರ್ಧೆಗಳಲ್ಲಿ ಈ ರಾತ್ರಿ ಶಾಲೆಗಳ ವಿದ್ಯಾರ್ಥಿಗಳು ಬಹುಮಾನ ಗಿಟ್ಟಿಸಿ ಬರುತ್ತಿದ್ದರು. ಅಂದರೆ ಆ ವಿದ್ಯಾರ್ಥಿಗಳ ನಿಜವಾದ ಪ್ರತಿಭೆಗೆ ಕನ್ನಡಿ ಹಿಡಿದಂತೆ. ಆ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿ ರಾತ್ರಿ ಶಾಲೆಗಳ ಹಳೆ ವಿದ್ಯಾರ್ಥಿಗಳು, ಹಾಗೂ ಕೆಲವು ಶಿಕ್ಷಕರು. ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘಟನೆಗಳು ಪ್ರತಿ ವರ್ಷ ಅಂತರ್ ಶಾಲೆ/ ಕಾಲೇಜು ಸ್ಪರ್ಧೆಗಳನ್ನು ಆಯೋಜಿಸುತ್ತಾ ಪ್ರತಿಭೆಗಳಲ್ಲಿ ಕೆಲವು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ,

ರಾತ್ರಿ ಶಾಲೆಯ ವಿದ್ಯಾರ್ಥಿಗಳನ್ನು ಕಾಲ್ಚೆಂಡಾಟದಲ್ಲಿ ಪರಿಪೂರ್ಣರನ್ನಾಗಿಸಿ ಆ ಪ್ರತಿಭೆಗಳು ರಾಜ್ಯ-ರಾಷ್ಟ್ರ- ಅಂತರ್‌ರಾಷ್ಟ್ರ ಮಟ್ಟದಲ್ಲಿ ಖ್ಯಾತರಾಗುವಂತೆ ಮಾಡಿದ ಶ್ರೇಯ ಹಳೆ ವಿದ್ಯಾರ್ಥಿಗಳ ಸಂಘಟನೆಗಳಿಗೆ ಸಲ್ಲುತ್ತದೆ. ಇಲ್ಲಿನ ಪ್ರತಿಭೆಗಳು ಮಿಂಚಿ ಅಂದಿನ ದಿನಗಳಲ್ಲಿ ಅದರಿಂದಲೇ ಟಾಟಾ, ಐಡಿಬಿಐ, ಆರ್‌ಬಿಐ ಮತ್ತು ಹೆಚ್ಚಿನ ಎಲ್ಲಾ ಬ್ಯಾಂಕುಗಳಲ್ಲಿ, ಇನ್‌ಕಂಟ್ಯಾಕ್ಸ್ ಮೊದಲಾದ ದೊಡ್ಡ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಅಲಂಕರಿಸಿದ್ದು ಇಂದು ಇತಿಹಾಸ. ಹೀಗೆ ಇಲ್ಲಿ ಅರಳಿದ ಬಹಳಷ್ಟು ಪ್ರತಿಭೆಗಳು ಅಂತರ್‌ರಾಷ್ಟ್ರ ಮಟ್ಟದಲ್ಲಿ ಮಿಂಚಿವೆ. ಅವರಲ್ಲಿ ತೇಜಪಾಲ್ ಸಾಲ್ಯಾನ್, ಶಿವಪ್ಪಣ್ಣ, ತಂಡದ ಮ್ಯಾನೇಜರ್ ಆಗಿದ್ದ ದೇವದಾಸ್ ಶ್ರೀಯಾನ್, ಶೇಖರ ಬಂಗೇರ, ಭಾರತವನ್ನು ಪ್ರತಿನಿಧಿಸಿದ್ದ ಕಾಲ್ಚೆಂಡಾಟ ತಂಡದ ನಾಯಕನಾಗಿದ್ದ ರತ್ನಾಕರ ಶೆಟ್ಟಿ, ಫುಟ್ಬಾಲ್ ವರ್ಲ್ಡ್‌ಕಪ್ ಹಾಗೂ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ಗೋಲ್‌ಕೀಪರ್ ಆಗಿದ್ದ ಸಂಜೀವ ಉಚ್ಚಿಲ್, ರೆಫ್ರಿ ಕುಂದರ್, ಅಂತರ್‌ರಾಷ್ಟ್ರೀಯ (ಫಿಫಾ) ರೆಫ್ರಿ ಆಗಿದ್ದ ಎಸ್.ಎಸ್. ಶೆಟ್ಟಿ, ಮಾಧವ್ ಸುವರ್ಣ ಮೊದಲಾದವರೆಲ್ಲ ರಾತ್ರಿ ಶಾಲೆಗಳ ಹೆಮ್ಮೆಯ ಹಳೆ ವಿದ್ಯಾರ್ಥಿಗಳು. ಇವರೆಲ್ಲ ಹಳೆ ವಿದ್ಯಾರ್ಥಿ ಸಂಘಟನೆಗಳ ಪ್ರೇರಣೆ ಹಾಗೂ ಪ್ರೋತ್ಸಾಹಗಳ ಕೊಡುಗೆ. ಇನ್ನೂ ಉಲ್ಲೇಖಿಸಲು ಬೇಕಾದ ಹೆಸರುಗಳು ಹತ್ತು ಹಲವು ಇವೆ. ಹಳೆ ವಿದ್ಯಾರ್ಥಿಗಳ ಜತೆಜತೆಗೆ ರಾಮಚಂದ್ರ ಉಚ್ಚಿಲ್ ಅವರ ಕೊಡುಗೆಯು ಗಣನೀಯವಾದುದು. ಫುಟ್ಬಾಲ್‌ಗೆ ‘ಕಾಲ್ಚೆಂಡಾಟ’ ಎಂಬ ಅಚ್ಛ ಕನ್ನಡದ ಪದವನ್ನು ಕನ್ನಡಕ್ಕೆ ನೀಡಿದವರು ರಾಮಚಂದ್ರ ಉಚ್ಚಿಲ್ ಎಂಬುವುದು ಉಲ್ಲೇಖನಿಯ. ಕಾಲ್ಚೆಂಡಾಟದ ಬಗ್ಗೆ ಕ್ರೀಡಾ ಸುದ್ದಿಯನ್ನು ನಿರಂತರ ಬರೆಯುತ್ತಿದ್ದವರು ರಾಮಚಂದ್ರ ಉಚ್ಚಿಲ್.

ರಾತ್ರಿ ಶಾಲೆಗಳು ಎಸ್.ಎಸ್.ಸಿ (10th) ನೂರು ಪ್ರತಿಶತ ಫಲಿತಾಂಶ ಬರುವಲ್ಲೂ ಹಳೆ ವಿದ್ಯಾರ್ಥಿಗಳ ಕೈವಾಡವಿದೆ. ಸಮಯದ ಕೊರತೆ, ಹಣದ ಕೊರತೆಯಿಂದ ಇತರ ಶಾಲಾ ವಿದ್ಯಾರ್ಥಿಗಳಂತೆ ಟ್ಯೂಷನ್‌ಗೆ ಹೋಗುವುದು ಅಸಾಧ್ಯ. ಇದನ್ನು ಚೆನ್ನಾಗಿ ಅರಿತಿರುವ ಹಳೆ ವಿದ್ಯಾರ್ಥಿಗಳು ರವಿವಾರದಂದು ಬೆಳಗ್ಗೆಯಿಂದ ಸಾಯಂಕಾಲದವರೆಗೂ ಪ್ರತಿಭಾನ್ವಿತ ಅಧ್ಯಾಪಕರನ್ನು ಅಥವಾ ಪರಿಣಿತರನ್ನು ಕರೆಸಿ ವಿಶೇಷ ತರಬೇತಿಗಳ ಏರ್ಪಾಡು ಮಾಡಿ ರಾತ್ರಿ ಶಾಲಾ ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸುವಲ್ಲಿ ಸಂಘಟನೆಗಳ ಪಾಲು ಮಹತ್ವದ್ದು. ಆ ವಿಶೇಷ ತರಗತಿಗಳ ಸ್ಥಳದ ವ್ಯವಸ್ಥೆ, ವಿದ್ಯಾರ್ಥಿ-ಶಿಕ್ಷಕರ ಊಟೋಪಚಾರ, ಶಿಕ್ಷಕರಿಗೆ ಬಂದು ಹೋಗುವ ಖರ್ಚು ವೆಚ್ಚ ಇತ್ಯಾದಿಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಹಳೆ ವಿದ್ಯಾರ್ಥಿ ಸಂಘಟನೆಗಳು ನೆರವೇರಿಸುತ್ತಿದ್ದವು.

ಪ್ರತಿ ವರ್ಷ ಶಾಲೆಗಳು ನಡೆಸುವ ವಾರ್ಷಿಕೋತ್ಸವ ದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುವ ಇವರು ತಮ್ಮದೇ ಸಂಘಟನೆಯ ವಾರ್ಷಿಕೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಯಾ ಶಾಲೆಯ ವಿದ್ಯಾರ್ಥಿ-ಶಿಕ್ಷಕರನ್ನು ಒಟ್ಟು ಸೇರಿಸಿಕೊಂಡು ಮಾಡುವ ರೀತಿ ಅನುಕರಣೀಯ ವಾದುದು. ಪ್ರತಿ ವರ್ಷ ಎಲ್ಲ ರಾತ್ರಿ ಶಾಲಾ ಶಿಕ್ಷಕರಲ್ಲಿ ಯೋಗ್ಯರಾದ ಓರ್ವ ಶಿಕ್ಷಕರನ್ನು ಗುರುತಿಸಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಅವರನ್ನು ಗೌರವಿಸುವ ಹಳೆ ವಿದ್ಯಾರ್ಥಿಗಳು ಶಿಕ್ಷಕರ ದಿನದಂದು ಗುರುವಂದನಾ ಕಾರ್ಯವನ್ನು ಅರ್ಥಪೂರ್ಣವಾಗಿ ನಡೆಸುತ್ತಿದ್ದರು. ಆ ಸಂದರ್ಭಗಳಲ್ಲಿ ಆಯಾ ಶಾಲೆಗಳ ಹಾಗೂ ಒಟ್ಟೂ ರಾತ್ರಿ ಶಾಲೆಗಳ ಪ್ರಥಮ ಮೂರು ಸ್ಥಾನ (ಹತ್ತನೇ ತರಗತಿ) ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕನ್ನಡದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ರಾತ್ರಿ ಶಾಲಾ ಮಕ್ಕಳನ್ನು ನಗದು ಬಹುಮಾನವಿತ್ತು ಪುರಸ್ಕರಿಸಿ ಗೌರವಿಸಿದ ಸ್ತುತ್ಯ ಕಾರ್ಯ ಈ ಸಂಘಟನೆಗಳಿಂದ ನಿರಂತರ ನಡೆಯುತ್ತಾ ಬಂದಿರುವುದನ್ನು ಗಮನಿಸಬಹುದು.

ಸಾಹಿತ್ಯ-ಸಾಂಸ್ಕೃತಿಕವಾಗಿಯೂ ಈ ಸಂಘಟನೆಗಳ ಕೊಡುಗೆ ಅಪಾರ. ಕವಿಕೂಟ, ಸಾಹಿತ್ಯ ಗೋಷ್ಠಿಗಳನ್ನು, ತಾಳಮದ್ದಳೆಗಳನ್ನು ಕಾಲಕಾಲಕ್ಕೆ ನೆರವೇರಿಸುತ್ತಾ ಆ ಮೂಲಕ ಕವಿಗಳನ್ನು-ಸಾಹಿತಿ-ಕಲಾವಿದರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಾ ಬಂದಿರುವುದನ್ನು ಉಲ್ಲೇಖಿಸತಕ್ಕದ್ದು. ಮದರ್ ಇಂಡಿಯಾ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಆಯೋಜಿಸಿದ್ದ ಕವಿಗೋಷ್ಠಿಯ ಕವಿತೆಗಳನ್ನು ‘ಇರುಳು-ಬೆಳಕು’ ಎಂಬ ಕೃತಿ ರೂಪದಲ್ಲಿ ಸಂಕಲಿಸಿ ಪ್ರಕಟಿಸಿದೆ. ಪ್ರಕಾಶನ ಕಾರ್ಯದಲ್ಲಿ ಗುರು ನಾರಾಯಣ ರಾತ್ರಿ ಶಾಲೆಯು ತನ್ನ ಸೇವೆಗೈದಿದೆ. ಮಾತ್ರವಲ್ಲದೆ ಕೃತಿ ಬಿಡುಗಡೆ ಸಂದರ್ಭ ಹಲವಾರು ಲೇಖಕರಿಗೆ ವೇದಿಕೆ ಒದಗಿಸಿ ಆ ಲೇಖಕರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಈ ಸಂಘಟನೆಗಳು ಮಾಡುತ್ತಾ ಬಂದಿವೆ. ಹಗಲಿನ ಶಾಲಾ ವಿದ್ಯಾರ್ಥಿಗಳಲ್ಲಿ ಅರ್ಹ ಬಡವಿದ್ಯಾರ್ಥಿಗಳನ್ನು ಈ ರಾತ್ರಿ ಶಾಲಾ ಸಂಘಟನೆಗಳು ದತ್ತು ಸ್ವೀಕರಿಸಿ ಅವರ ಪೂರ್ಣ ಖರ್ಚು-ವೆಚ್ಚವನ್ನು ಭರಿಸುತ್ತಿದ್ದವು ಅನ್ನುವಾಗ ಯಾರಿಗಾದರೂ ಅಭಿಮಾನ ಉಂಟಾಗದೇ ಇರದು.

 ಕೆಲವೊಂದು ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘಟನೆ ಗಳು ತಮ್ಮ ಮಾತೃ ಸಂಸ್ಥೆಯ ವಿಸ್ತಾರದ ಸಂದರ್ಭಗಳಲ್ಲಿ ಬಹುಮುಖ್ಯವಾದ ಕೊಡುಗೆಯನ್ನು ನೀಡಿ ವಿದ್ಯಾಸಂಸ್ಥೆ ಬೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಈ ಎಲ್ಲ ಮಹೋನ್ನತ ಕಾರ್ಯಗಳಿಗಾಗಿ ತಮ್ಮದೇ ಹಳೆ ವಿದ್ಯಾರ್ಥಿ ಸದಸ್ಯರನ್ನು, ಹೊಟೇಲ್ ಸೇಠ್‌ಗಳನ್ನು, ಉದ್ಯಮಿಗಳನ್ನು ಅವಲಂಬಿಸಿದ್ದ ಇವರು ತಮ್ಮ ವಿದ್ಯಾರ್ಥಿ ವೃಂದದವರಿಂದ ಲಕ್ಕಿಡಿಪ್ ಮುಂತಾದ ರೀತಿಯಲ್ಲಿ ಹಣ ಒಟ್ಟು ಮಾಡುವ; ಆ ಮೂಲಕ ತಮ್ಮ ಕಾಯಕಕ್ಕೆ ಬಲ ತುಂಬುವ ಕಾಯಕದ ಹಿಂದೆ ತಾವು ವಿದ್ಯಾರ್ಥಿಗಳಿದ್ದಾಗ ಪಟ್ಟಪಾಡು, ಉಂಡ ನೋವು, ಅವಮಾನಗಳು ಕೆಲಸ ಮಾಡಿವೆ. ನಮ್ಮಂತೆ ಇವರು ಒದ್ದಾಡಬಾರದು ಎಂಬುವುದೇ ಇವರ ಮುಖ್ಯ ಗುರಿ.

ಇದು ಹಿಂದೆ ಹತ್ತಿಪ್ಪತ್ತು ರಾತ್ರಿ ಶಾಲೆಗಳು ಇದ್ದ ಅಂದಿನ ಅಂದರೆ ತೊಂಭತ್ತರ ದಶಕದವರೆಗಿನ ಕತೆ. ಆದರೆ ಮುಂದೆ.......!
ಮುಂದೆ, ಬಲಗೊಂಡ ಅವಿಭಜಿತ ದಕ್ಷಿಣ ಕನ್ನಡ, ಅಲ್ಲಿಂದ ಮುಂಬೈಯತ್ತ ಆಸೆ ಗಣ್ಣಿನಿಂದ ನೋಡುವ ಕಣ್ಣುಗಳ ಮಾಯವಾಗುವಿಕೆ; ಹೊಟೇಲ್‌ಗಳು ಬಿಯರ್ ಬಾರ್, ಲೇಡಿಸ್ ಬಾರ್‌ಗಳಾಗಿ ಪರಿವರ್ತಿತಗೊಂಡಿದ್ದು, ಕನ್ನಡಿಗರ ಕೇಂದ್ರ ಸ್ಥಳವಾಗಿದ್ದ ಕೋಟೆ ಪರಿಸರದಿಂದ ಕನ್ನಡಿಗರು ಉಪ ನಗರಗಳತ್ತ ಮುಖ ಮಾಡಿದ್ದು; ಮಹಾರಾಷ್ಟ್ರ ಸರಕಾರದ ಅಲ್ಪಸಂಖ್ಯಾತರ ಶಾಲೆಗಳಿಗೆ ಮಲತಾಯಿ ಧೋರಣೆ, ಮುಂಬೈ ಕನ್ನಡಿಗರ ಬಗ್ಗೆ ಕರ್ನಾಟಕ ಸರಕಾರ ಹಾಗೂ ಅವಿಭಜಿತ ದಕ್ಷಿಣ ಕನ್ನಡದ ಶಾಸಕರ ನಿರ್ಲಕ್ಷ.. ಹೀಗೆ ಎಲ್ಲಾ ಕಡೆಯಿಂದ ಬೀಸಿದ ಅಬ್ಬರದ ಗಾಳಿಗೆ ರಾತ್ರಿ ಶಾಲೆಗಳು ತತ್ತರಿಸಿದವು. ಒಂದೊಂದಾಗಿ ತನ್ನ ಬಾಗಿಲುಗಳನ್ನು ಮುಚ್ಚತೊಡಗಿದವು. ಈಗ ಉಳಿದಿರುವುದು ಕೇವಲ ಎರಡು-ಮೂರು ರಾತ್ರಿ ಶಾಲೆಗಳು. ಅದರಲ್ಲಿ ಬಿಲ್ಲವರ ಅಸೋಸಿಯೇಶನ್ ನಡೆಸುತ್ತಿರುವ ಗುರುನಾರಾಯಣ ರಾತ್ರಿ ಶಾಲೆ ಸಾಂತಕ್ರೂಸಿನಲ್ಲಿ ಸುಸ್ಥಿತಿಯಲ್ಲಿ ಇದೆ. ಆದರೆ ಇಂದಿನ ಕೊರೋನ ಮಹಾಮಾರಿಯಿಂದಾಗಿ ಅರ್ಧ ಜೀವದಿಂದಿರುವ ಉಳಿದ ಶಾಲೆಗಳು ಬಾಗಿಲು ತೆರೆಯುವುದು ಬಹುಶಃ ಕನಸಿನ ಮಾತು.

ಅಂತಹ ಸಂದಿಗ್ಧ ಸ್ಥಿತಿಯಲ್ಲಿ ಅವುಗಳ ಶ್ರೇಯೋಭಿ ವೃದ್ಧಿಗಾಗಿಯೇ ಪಣತೊಟ್ಟು ನಿಂತಿರುವ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘಟನೆಗಳು ಒಂದೊಂದಾಗಿ ತೆರೆಮರೆಗೆ ಸರಿದಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಕೆಲವೊಂದು ಹಳೆ ವಿದ್ಯಾರ್ಥಿ ಸಂಘಟನೆಗಳ ಸ್ವಂತ ಕಚೇರಿ ಇಂದು ಬೀಗ ಜಡಿದು ಕಾಯ ಕಲ್ಪಕ್ಕಾಗಿ ಎದುರು ನೋಡುತ್ತಿವೆ.
ಏಕೆಂದರೆ ಅವುಗಳ ಗುರಿ ರಾತ್ರಿ ಶಾಲೆಗಳು; ಅಲ್ಲಿನ ವಿದ್ಯಾರ್ಥಿಗಳು.

ಆದರೆ ಈ ರಾತ್ರಿ ಶಾಲಾ ಹಳೆವಿದ್ಯಾರ್ಥಿ ಸಂಘಟನೆಗಳಿಗೆ ಒಂದು ವಿಕಲ್ಪವಿತ್ತು. ಎಲ್ಲಾ ರಾತ್ರಿ ಶಾಲೆಗಳ ಒಂದು ಒಕ್ಕೂಟ ರಚಿಸಿ ಟೆಕ್ನಿಕಲ್ ಅಥವಾ ಇನ್ನಾವುದೋ ಕಾಲೇಜು ಮೊದಲಾದ ಮಹತ್ತರವಾದ ಕಾರ್ಯ ನಿರ್ವಹಿಸಬಹುದಿತ್ತು. ಇದಕ್ಕಾಗಿ ರವಿ ಬಂಗೇರ, ಜಯಕರ್ ಪೂಜಾರಿ ಮೊದಲಾದವರು ಪ್ರಯತ್ನ ಪಟ್ಟದ್ದೂ ಇದೆ. ಆದರೆ ಅದು ಸಫಲತೆ ಕಂಡಿಲ್ಲ. ಗತ ಕಾಲವನ್ನು ನೆನಪಿಸುತ್ತಾ ತಮ್ಮ ಅಸ್ಥಿತ್ವವನ್ನು ಇಂದೂ ಉಳಿಸಿಕೊಂಡಿರುವ ಹಳೆ ವಿದ್ಯಾರ್ಥಿ ಸಂಘಗಳಲ್ಲಿ ಹೊಸ ಆಯಾಮವನ್ನು ಪಡೆದು ಕ್ರಿಯಾಶೀಲವಾಗಿರುವ ಸಂಘಟನೆಗಳಲ್ಲಿ ಮದರ್ ಇಂಡಿಯಾ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ, ಗುರು ನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಮುಂಚೂಣಿಯಲ್ಲಿವೆ.

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News