ತನ್ನ ಹಳ್ಳಿಗೆ ವಾಪಸಾದ ಟೀಮ್ ಇಂಡಿಯಾ ಆಟಗಾರ ನಟರಾಜನ್‌ ಗೆ ಭರ್ಜರಿ ಸ್ವಾಗತ: ಸೆಹ್ವಾಗ್‌ ಶ್ಲಾಘನೆ

Update: 2021-01-22 06:52 GMT

ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟೀಮ್ ಇಂಡಿಯಾದ ಯುವ ವೇಗದ ಬೌಲರ್ ನಟರಾಜನ್ ತಮಿಳುನಾಡಿನ ತನ್ನ ಹಳ್ಳಿಗೆ ವಾಪಸಾದ ಸಂದರ್ಭದಲ್ಲಿ ಲಭಿಸಿರುವ ಭರ್ಜರಿ ಸ್ವಾಗತದ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಸ್ಟ್ರೇಲಿಯದಲ್ಲಿ ಇತ್ತೀಚೆಗೆ ಕೊನೆಗೊಂಡ 4 ಪಂದ್ಯಗಳ ಸರಣಿಯಲ್ಲಿ ಭಾಗವಹಿಸಿದ್ದ ಎಡಗೈ ವೇಗದ ಬೌಲರ್ ನಟರಾಜನ್ ತಮಿಳುನಾಡಿನ ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಹಳ್ಳಿಗೆ ವಾಪಸಾದರು. ಹಳ್ಳಿಯ ಜನರು ಕುದುರೆಯ ರಥ ನಿರ್ಮಿಸಿ ನಟರಾಜನ್‍ರನ್ನು ಅದರ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿ ಸ್ವಾಗತಿಸಿದರು.”

ವೀಡಿಯೊವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಸೆಹ್ವಾಗ್, ಇದು ಭಾರತ, ಇಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಇದು ಎಲ್ಲಕ್ಕಿಂತ ಮಿಗಿಲಾದುದು. ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿ ಹಳ್ಳಿಗೆ ಆಗಮಿಸಿದ ನಟರಾಜನ್ ಭವ್ಯ ಸ್ವಾಗತ ಪಡೆದರು’’ ಎಂದು ಟ್ವೀಟಿಸಿದರು.

ಬ್ರಿಸ್ಬೇನ್ ನಲ್ಲಿ ನಡೆದಿದ್ದ 4ನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ನಟರಾಜನ್ 3 ವಿಕೆಟ್‍ಗಳನ್ನು ಪಡೆದು ಮಿಂಚಿದ್ದರು.

ಪ್ರವಾಸಿ ಭಾರತ ತಂಡ ಆಸ್ಟ್ರೇಲಿಯವನ್ನು 2-1 ಅಂತರದಿಂದ ಸೋಲಿಸಿ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.
ನೆಟ್ ಬೌಲರ್ ಆಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ನಟರಾಜನ್ ಆಸ್ಟ್ರೇಲಿಯದ ಸುದೀರ್ಘ ಕ್ರಿಕೆಟ್ ಪ್ರವಾಸದ ವೇಳೆ, ತಲಾ 3 ಪಂದ್ಯಗಳ ಟ್ವೆಂಟಿ-20, ಏಕದಿನ ಸರಣಿಯಲ್ಲೂ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದರು. ಒಂದೇ ಬಾರಿ ಎಲ್ಲ 3 ಮಾದರಿ ಕ್ರಿಕೆಟ್ ಆಡುವ ಅವಕಾಶ ಪಡೆದ ಭಾರತದ ಮೊದಲ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News