​ಇನ್ನೂ ಅಂತಿಮವಾಗದ ರಾಮಮಂದಿರ ಬ್ಲೂಪ್ರಿಂಟ್:‌ ಅಡಿಪಾಯಕ್ಕೆ ಸರಯೂ ನದಿ ಹರಿವಿನ ಭೀತಿ!

Update: 2021-01-22 11:48 GMT

ಅಯ್ಯೋಧ್ಯೆ,ಜ.22: ಅಯ್ಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಭವ್ಯ ರಾಮ ಮಂದಿರದ ನೀಲನಕಾಶೆ ಅಂತಿಮಗೊಳಿಸುವ ಸಲುವಾಗಿ ಗುರುವಾರ ಫೈಝಾಬಾದ್ ಸಕ್ರ್ಯೂಟ್ ಹೌಸ್‍ನಲ್ಲಿ ರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ದೇಶದ ಅತ್ಯುನ್ನತ ಇಂಜಿನಿಯರುಗಳ ಜತೆ ಸತತ ಐದು ಗಂಟೆ ಕುಳಿತು ಚರ್ಚಿಸಿದರೂ  ಸಭೆಯ ಉದ್ದೇಶ ಸಫಲವಾಗಿಲ್ಲ ಎಂದು timesofindia.com ವರದಿ ಮಾಡಿದೆ.

ಇಂದು ಲಾರ್ಸೆನ್ ಎಂಡ್ ಟೌಬ್ರೋ, ಟಾಟಾ ಗ್ರೂಪ್ ಸಂಸ್ಥೆಗಳ ಇಂಜಿನಿಯರುಗಳು ಮತ್ತಿತರ ತಜ್ಞರ ಜತೆ ನಡೆಯಲಿರುವ ಇನ್ನೊಂದು ಸುತ್ತಿನ ಮಾತುಕತೆಗಳಲ್ಲಿ  ರಾಮ ಮಂದಿರದ ನೀಲನಕಾಶೆ ಅಂತಿಮಗೊಳ್ಳಬಹುದೆಂಬ ನಿರೀಕ್ಷೆಯಿದೆ.

ರಾಮಜನ್ಮಭೂಮಿ ಸ್ಥಳದ ಅಡಿಯಲ್ಲಿ ಸರಯೂ ನದಿಯ ತೊರೆಯ ಹರಿಯುವಿಕೆಯನ್ನು ತಡೆಗಟ್ಟಲು  ತಡೆಗೋಡೆ ನಿರ್ಮಾಣ ಕುರಿತಂತೆ ತಜ್ಞರು ಸಹಮತಕ್ಕೆ ಬಂದ ನಂತರವಷ್ಟೇ ನೀಲನಕಾಶೆ ಅಂತಿಮಗೊಳ್ಳಬಹುದು ಎಂದು ಮಂದಿರ ನಿರ್ಮಾಣ ಟ್ರಸ್ಟಿನ ಪ್ರಮುಖ ಸದಸ್ಯರೊಬ್ಬರು ತಿಳಿಸಿದ್ದಾರೆ.

"ಸರಯೂ ನದಿ ತನ್ನ ಪಥ ಬದಲಾಯಿಸಿ, ಮಂದಿರದ ಅಡಿಪಾಯವನ್ನು ಹಾನಿಗೊಳಿಸುವ ಸಾಧ್ಯತೆಯನ್ನು ಪರಿಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರಕ್ಕೆ ಬರಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದೆಯಾದರೂ, ಕಳೆದ ವರ್ಷದ ಕೊನೆಯ ಭಾಗದಲ್ಲಿ ದೇವಸ್ಥಾನಕ್ಕಾಗಿ ಮೊದಲ ಸ್ತಂಭವನ್ನು ಕೆಳಗಿಳಿಸಿದಾಗ ಅದು  ಸಡಿಲು ಮರಳು ಹಾಗೂ ನೀರಿನಲ್ಲಿ ಸ್ಥಿರವಾಗಿ ನಿಲ್ಲದೆ ಅಲುಗಾಡಿತ್ತು. ಒಟ್ಟು 2.77 ಎಕರೆ ವಿಸ್ತೀರ್ಣ ಪ್ರದೇಶದ ಜಮೀನಿನ ಸುತ್ತ ಆವರಣ ಗೋಡೆ ನಿರ್ಮಿಸಲೆಂದು ಇಟ್ಟಿಗೆಗಳನ್ನು ಶೇಖರಿಸಿಟ್ಟಿದ್ದನ್ನು ಬಿಟ್ಟರೆ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ ಎಂದು timesofindia.com ವರದಿ ಮಾಡಿದೆ.

ತಡೆಗೋಡೆ ನಿರ್ಮಾಣಕ್ಕೆ ರಿಇನ್ಫೋಸ್ರ್ಡ್ ಸಿಮೆಂಟ್ ಕಾಂಕ್ರೀಟ್ ಬಳಕೆ ಮಾಡುವುದಕ್ಕೆ ತಜ್ಞರು ಅಂತಿಮವಾಗಿ ಸಲಹೆ ನೀಡಬಹುದಾಗಿದೆಯೆಂದು ಮೂಲಗಳು ತಿಳಿಸಿವೆ, ಆದರೆ ಮಂದಿರ ನಿರ್ಮಾಣ ಟ್ರಸ್ಟ್ ಮಾತ್ರ ಅಡಿಪಾಯಕ್ಕೆ ಕಬ್ಬಿಣದ ಬಳಕೆ ಸಾಧ್ಯತೆಯಿಲ್ಲ ಎಂದು ಈ ಹಿಂದೆ ಹೇಳಿತ್ತು.

ಮಂದಿರದ ಅಡಿಪಾಯ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ವರದಿಯನ್ನು ಐಐಟಿಗಳ ತಜ್ಞರು ಸಿದ್ಧಪಡಿಸುತ್ತಿದ್ದಾರೆ. ಹದಿನೇಳು ಮೀಟರ್  ಅಡಿಗಿಂತ ಕೆಳಗೆ ಮಣ್ಣು ಸಡಿಲವಾಗಿದೆ ಹಾಗೂ ಅದರ ನಂತರ ನೀರು ಮಾತ್ರ ಇದೆ. ಇಲ್ಲಿಯ ತನಕ 120 ಮೀಟರ್ ಆಳದ ತನಕ ಅಗೆಯಲಾಗಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News