"ಅರ್ನಬ್‌ ವಿಚಾರದಲ್ಲಿ ರಾಷ್ಟ್ರೀಯ ಭದ್ರತೆ ಜತೆ ರಾಜಿ ಮಾಡಿಕೊಳ್ಳಲಾಗಿದೆ, ಸರಕಾರದ ಮೌನ ಅಪಾಯಕಾರಿ"

Update: 2021-01-22 11:56 GMT

ಹೊಸದಿಲ್ಲಿ,ಜ.22: ಬಾಲಾಕೋಟ್ ದಾಳಿಯ ಕುರಿತಂತೆ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ ಅವರು ಬಾರ್ಕ್‍ನ (BARC) ಮಾಜಿ  ಸಿಇಒ ಪಾರ್ಥೊ ದಾಸಗುಪ್ತಾ ಜತೆ ನಡೆಸಿದ್ದ ಹಾಗೂ ಸೋರಿಕೆಯಾದ ವಾಟ್ಸ್ಯಾಪ್ ಚಾಟ್‍ಗಳ  ಕುರಿತಂತೆ ಕೇಂದ್ರ ಸರಕಾರದ ಮೌನ ಆಘಾತಕಾರಿ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರಲ್ಲದೆ, ರಾಷ್ಟ್ರೀಯ ಭದ್ರತೆಯ ಜತೆ ಸ್ಪಷ್ಟವಾಗಿ ರಾಜಿ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ  ಸೋನಿಯಾ ರೈತ ಪ್ರತಿಭಟನೆಗಳ ಕುರಿತಂತೆ ಸರಕಾರದ ಅಸಂವೇದಿತನ ಹಾಗೂ ದುರಹಂಕಾರ ಆಘಾತಕಾರಿ ಎಂದೂ ಸೋನಿಯಾ ಹೇಳಿದ್ದಾರೆ.

"ರಾಷ್ಟ್ರೀಯ ಭದ್ರತೆಯನ್ನು ಹೇಗೆ ರಾಜಿ ಮಾಡಿಕೊಳ್ಳಲಾಗಿದೆ ಎಂಬ ಕುರಿತಾದ ಕಳವಳಕಾರಿ ವರದಿಗಳು ತೀರಾ ಇತ್ತೀಚೆಗೆ ಬಂದಿದ್ದವು. ಕೆಲ ದಿನಗಳ ಹಿಂದೆ ಆಂಟನಿ ಜೀ (ಮಾಜಿ ರಕ್ಷಣಾ ಸಚಿವ) ಮಾತನಾಡುತ್ತಾ ಮಿಲಿಟರಿ ಕಾರ್ಯಾಚರಣೆ ಕುರಿತ ಮಾಹಿತಿಗಳನ್ನು ಸೋರಿಕೆ ಮಾಡುವುದು ದೇಶದ್ರೋಹ ಎಂದಿದ್ದರು. ಆದರೂ  ಈ ವಿಚಾರದಲ್ಲಿ ಸರಕಾರದ ಮೌನ ಆಘಾತಕಾರಿ" ಎಂದು ವರ್ಚುವಲ್ ಸಭೆಯಲ್ಲಿ ಮಾತನಾಡುತ್ತಾ ಅವರು ಹೇಳಿದ್ದಾರೆ.

"ಇತರರಿಗೆ ದೇಶಭಕ್ತಿಯ ಹಾಗೂ ರಾಷ್ಟ್ರಪ್ರೇಮದ ಪ್ರಮಾಣಪತ್ರ ನೀಡುವವರ ಬಣ್ಣ ಈಗ ಬಯಲಾಗಿದೆ" ಎಂದು ಸೋನಿಯಾ ಹೇಳಿದರು.

ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದ ಕುರಿತು ಪ್ರತಿಕ್ರಿಯಿಸಿದ ಅವರು "ಈ ಮೂರು ಕಾನೂನುಗಳನ್ನು ಅವಸರದಿಂದ ಸಿದ್ಧಪಡಿಸಲಾಗಿತ್ತು ಎಂಬುದು ಸ್ಪಷ್ಟ, ಈ ಕಾನೂನುಗಳ ಪರಿಣಾಮಗಳ ಕುರಿತು ಚರ್ಚಿಸಲು ಸಂಸತ್ತಿಗೆ ಉದ್ದೇಶಪೂರ್ವಕವಾಗಿ ಅವಕಾಶ ನಿರಾಕರಿಸಲಾಗಿತ್ತು. ನಾವು ಈ ಕಾನೂನುಗಳ ಕುರಿತು ಆರಂಭದಿಂದಲೂ ಸ್ಪಷ್ಟ ಧೋರಣೆ ಹೊಂದಿದ್ದೇವೆ ಹಾಗೂ ಅವುಗಳನ್ನು ತಿರಸ್ಕರಿಸುತ್ತೇವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News