ಜೂನ್‌ ತಿಂಗಳಿನಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ನೂತನ ಅಧ್ಯಕ್ಷರ ಆಯ್ಕೆ

Update: 2021-01-22 12:23 GMT

ಹೊಸದಿಲ್ಲಿ,ಜ.22: ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ಚುನಾವಣಾ ಸೋಲಿನ ಬಳಿಕ ತ್ಯಜಿಸಿದಂದಿನಿಂದ ಇದುವರೆಗೂ ಕಾಂಗ್ರೆಸ್‌ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕವಾಗಿಲ್ಲ. ಇದೀಗ ಪಕ್ಷಕ್ಕೆ ನೂತನ ಅಧ್ಯಕ್ಷರನ್ನು ಜೂನ್‌ ತಿಂಗಳಿನಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ನಾಯಕ ಹಾಗೂ ಸಂಸತ್ ಸದಸ್ಯ‌ ಕೆ.ಸಿ ವೇಣುಗೋಪಾಲ್‌ ತಿಳಿಸಿದ್ದಾರೆ. ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯ ಸಭೆಯಲ್ಲಿ ಕಾಂಗ್ರೆಸ್‌ ನ ಎರಡು ತಂಡಗಳ ನಡುವೆ ನಡೆದ ಚರ್ಚೆಯಲ್ಲಿ ಈ ವಿಷಯವು ಪ್ರಸ್ತಾಪಿಸಿದ್ದು, ಜೂನ್‌ ತಿಂಗಳಿನಲ್ಲಿ ನೂತನ ಅಧ್ಯಕ್ಷರ ಆಯ್ಕೆಯಾಗಲಿದೆ ಎಂದು ತಿಳಿದು ಬಂದಿದೆ.

ಶುಕ್ರವಾರ ನಡೆದ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿ ಸಭೆಯಲ್ಲಿ, ಹಿರಿಯ ಕಾಂಗ್ರೆಸ್‌ ನಾಯಕರಾದ ಗುಲಾಮ್‌ ನಬಿ ಆಝಾದ್‌, ಆನಂದ್‌ ಶರ್ಮಾ, ಮುಕುಲ್‌ ವಾಸ್ನಿಕ್‌ ಹಾಗೂ ಪಿ ಚಿದಂಬರಂ ಕೂಡಲೇ ರಾಷ್ಟ್ರಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿಂದೆಯೂ ಈ ನಾಯಕರು ಪಕ್ಷದ ನಾಯಕತ್ವದ ಕುರಿತಾದಂತೆ ಮಾತನಾಡುತ್ತಲೇ ಬಂದಿದ್ದರು.

ಈ ವೇಳೆ ಅಶೋಕ್‌ ಗೆಹ್ಲೋಟ್‌, ಅಮರೀಂದರ್‌ ಸಿಂಗ್‌, ಎಕೆ ಆಂಟನಿ, ತಾರೀಖ್‌ ಅನ್ವರ್‌ ಹಾಗೂ ಊಮ್ಮನ್‌ ಚಾಂಡಿ ಸಹಿತ ಹಿರಿಯ ನಾಯಕರು, "ಮೊದಲು ನಾವು ಬಂಗಾಳ, ತಮಿಳುನಾಡು ಸೇರಿದಂತೆ ಮುಂದೆ ನಡೆಯಲಿರುವ ರಾಜ್ಯವಾರು ಚುನಾವಣೆಗಳ ಕುರಿತು ಗಮನ ಹರಿಸಬೇಕಾಗಿದೆ.  ಬಿಜೆಪಿ ಪಕ್ಷವು ನಮ್ಮ ಪಕ್ಷದಂತೆ ಆಂತರಿಕ ಚುನಾವಣೆಗಳ ಕುರಿತು ಮಾತನಾಡುವುದಿಲ್ಲ. ನಾವು ಮೊದಲು ರಾಜ್ಯವಾರು ಚುನಾವಣೆಗಳನ್ನು ಎದುರಿಸಿ ಬಳಿಕ ಆಂತರಿಕ ಚುನಾವಣೆ ನಡೆಸಬಹುದು" ಎಂದು ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

ಸದ್ಯ ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನದಿಂದ ಹೊರ ನಡೆದ ಬಳಿಕ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News