ಉವೈಸಿ ಪಕ್ಷವು ಬಿಜೆಪಿಯ ʼಬಿʼ ಟೀಮ್‌ ಅನ್ನುವುದು ಬಿಹಾರ ಚುನಾವಣೆಯಲ್ಲೇ ಸಾಬೀತಾಗಿದೆ: ಮಮತಾ ಬ್ಯಾನರ್ಜಿ

Update: 2021-01-22 13:34 GMT

ಕೊಲ್ಕತ್ತಾ,ಜ.22: ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಬಿಹಾರ ಚುನಾವಣೆಯಲ್ಲಿ `ಬಿಜೆಪಿಯ ಬಿ ಟೀಮ್' ಆಗಿ ಪಾತ್ರ ವಹಿಸಿರುವುದು ಈಗಾಗಲೇ  ಬಯಲುಗೊಂಡಿರುವುದರಿಂದ ಮುಂಬರುವ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದ ಪಾತ್ರ  ನಗಣ್ಯ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮುರ್ಷಿದಾಬಾದ್‍ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮಮತಾ, ಪಕ್ಷದ ನಾಯಕರು ಒಗ್ಗಟ್ಟಿನಿಂದ ಬಿಜೆಪಿ ಹಾಗೂ ವಿಭಜನಾತ್ಮಕ ಶಕ್ತಿಗಳ ವಿರುದ್ಧ ಹೋರಾಡಬೇಕೆಂದರು.

ಮುಸ್ಲಿಂ ಬಾಹುಳ್ಯದ ಮುರ್ಷಿದಾಬಾದ್‍ನಲ್ಲಿ 22 ವಿಧಾನಸಭಾ ಕ್ಷೇತ್ರಗಳಿವೆ. ಇತ್ತೀಚೆಗೆ ನಡೆದ ಬಿಹಾರ ಚುನಾವಣೆಗಳಲ್ಲಿ ಎಐಎಂಐಎಂ ಮುಸ್ಲಿಮರ ಜನಸಂಖ್ಯೆ ಅಧಿಕವಿರುವ ಸೀಮಾಂಚಲ ಪ್ರದೇಶದಲ್ಲಿ ಐದು ಸ್ಥಾನಗಳನ್ನು ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು. ಸೀಟು ಹಂಚಿಕೆ ವಿಚಾರ ಚರ್ಚಿಸಲು ಓವೈಸಿ ಅವರು ಇತ್ತೀಚೆಗೆ ಹೂಗ್ಲಿ ಜಿಲ್ಲೆಯ ಫುರ್ಫುರಾ ಶರೀಫ್‍ನ  ಫೀರ್ ಝಾದಾ ಅಬ್ಬಾಸ್  ಸಿದ್ದೀಖಿ ಅವರನ್ನು ಭೇಟಿಯಾಗಿದ್ದರು.

ತಮ್ಮ ಪಕ್ಷ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ ಎಂದು  ಓವೈಸಿ ಇತ್ತೀಚೆಗೆ ಹೇಳಿದ್ದರೆ ಅವರ  ಪಕ್ಷದ ಉದ್ದೇಶ ಮುಸ್ಲಿಂ ಮತಗಳನ್ನು ಒಡೆದು ಬಿಜೆಪಿಗೆ ಸಹಾಯ ಮಾಡುವುದಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News