ಅನಾರೋಗ್ಯಪೀಡಿತ ತಾಯಿಗೆ ವೀಡಿಯೊ ಕರೆ ಮಾಡಲು ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ಸುಪ್ರೀಂ ಅನುಮತಿ

Update: 2021-01-22 13:40 GMT
ಪತ್ರಕರ್ತ ಸಿದ್ದೀಕ್ ಕಪ್ಪನ್ 

ಹೊಸದಿಲ್ಲಿ,ಜ.22: ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಕುರಿತು ವರದಿಗಾರಿಕೆಗಾಗಿ ಉತ್ತರ ಪ್ರದೇಶದ ಹಥ್ರಾಸ್‌ಗೆ ತೆರಳುತ್ತಿದ್ದಾಗ ಇತರ ಮೂವರೊಂದಿಗೆ ಬಂಧಿಸಲ್ಪಟ್ಟಿದ್ದ ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರು ವೀಡಿಯೊ ಕರೆಯ ಮೂಲಕ ತನ್ನ ಅನಾರೋಗ್ಯಪೀಡಿತ ತಾಯಿಯೊಂದಿಗೆ ಮಾತನಾಡಲು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಅನುಮತಿ ನೀಡಿದೆ.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸಂದರ್ಭ ಹಿರಿಯ ವಕೀಲ ಕಪಿಲ್ ಸಿಬಲ್ ಅವರು,ಕಪ್ಪನ್ ಅವರ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಾರೆ ಮತ್ತು ತನ್ನ ಮಗನೊಂದಿಗೆ ಮಾತನಾಡಲು ಬಯಸಿದ್ದಾರೆ. ಇಂತಹ ಕರೆಗಳಿಗೆ ಅವಕಾಶವಿಲ್ಲ ನಿಜ, ಆದರೆ ನ್ಯಾಯಾಲಯವು ಈ ಸಂದರ್ಭದಲ್ಲಿ ವಿನಾಯಿತಿಯನ್ನು ನೀಡಬೇಕು ಎಂದು ವಾದಿಸಿದರು.

‘ನಾವು ಅದಕ್ಕೆ ಅವಕಾಶ ನೀಡುತ್ತೇವೆ ’ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ನೇತೃತ್ವದ ಪೀಠವು ಹೇಳಿತು.

‘ನೀವು ಅರ್ಜಿಯನ್ನು ವಜಾ ಮಾಡಿದರೂ ನಾನು ಚಿಂತಿಸುವುದಿಲ್ಲ,ಆದರೆ ನನ್ನ ಅಹವಾಲನ್ನು ಆಲಿಸಿ. ಕಪ್ಪನ್ ತಾಯಿ ಪ್ರಜ್ಞಾಶೂನ್ಯರಾಗಿದ್ದಾರೆ. ಆಕೆ ಸಾಯುವ ಮುನ್ನ ಕಪ್ಪನ್ ಅವರೊಂದಿಗೆ ಮಾತನಾಡಲು ಅನುಕೂಲವಾಗುವಂತೆ ವೀಡಿಯೊ ಕಾನ್ಫರೆನ್ಸಿಂಗ್‌ಗೆ ಅವಕಾಶ ನೀಡಿ’ ಎಂದೂ ಸಿಬಲ್ ಈ ಮುನ್ನ ವಾದಿಸಿದ್ದರು.

ಉತ್ತರ ಪ್ರದೇಶದ ಪೊಲೀಸರು ಕಪ್ಪನ್ ಮತ್ತು ಸಂಗಡಿಗರ ವಿರುದ್ಧ ಭಯೋತ್ಪಾದಕ ಕೃತ್ಯಕ್ಕೆ ಹಣ ಸಂಗ್ರಹಕ್ಕೆ ಸಂಬಂಧಿಸಿರುವ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಕಲಮ್‌ನಡಿ ಎಫ್‌ಐಆರ್ ದಾಖಲಿಸಿದ್ದಾರೆ. ಕಪ್ಪನ್ ಸದ್ಯ ಉತ್ತರ ಪ್ರದೇಶದ ಮಥುರಾ ಜೈಲಿನಲ್ಲಿದ್ದಾರೆ.

ಈ ಆರೋಪಗಳನ್ನು ನಿರಾಕರಿಸಿರುವ ಪತ್ರಕರ್ತರ ಸಂಘವು ಕಪ್ಪನ್‌ಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News