ʼಕಾಂಗರೂ ಕೇಕ್‌ʼ ಕತ್ತರಿಸಲು ನಿರಾಕರಿಸಿದ ಅಜಿಂಕ್ಯ ರಹಾನೆ: ಸಾಮಾಜಿಕ ತಾಣದಾದ್ಯಂತ ವ್ಯಾಪಕ ಪ್ರಶಂಸೆ

Update: 2021-01-22 14:49 GMT

ಹೊಸದಿಲ್ಲಿ,ಜ.22: ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗಾವಸ್ಕರ್‌ ಟೆಸ್ಟ್‌ ಸರಣಿಯನ್ನು ಐತಿಹಾಸಿಕವಾಗಿ ಜಯಿಸಿತ್ತು. ನಾಯಕ ವಿರಾಟ್‌ ಕೊಹ್ಲಿಯ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿ ಸರಣಿ ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಭಾರತಕ್ಕೆ ಆಗಮಿಸಿದ ಅಜಿಂಕ್ಯ ರಹಾನೆಗೆ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ಈ ನಡುವೆ ಇನ್ನೊಂದು ಕಾರಣಕ್ಕೂ ರಹಾನೆ ಸುದ್ದಿಯಾಗಿದ್ದಾರೆ.

ಹುಟ್ಟೂರಿಗೆ ಆಗಮಿಸಿದ ಸಂದರ್ಭ ರಹಾನೆ ಪತ್ನಿ, ಮಗು, ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ನೆರೆದು ಭರ್ಜರಿ ಸ್ವಾಗತ ಕೋರಿದ್ದರು. ಈ ವೇಳೆ ಅಭಿಮಾನಿಗಳು ಮೇಲೆ ಕಾಂಗರೂ ಪ್ರತಿಕೃತಿಯಿದ್ದ ಕೇಕ್‌ ಒಂದನ್ನು ತಯಾರಿಸಿದ್ದರು. ಆದರೆ ಈ ಕೇಕ್‌ ಅನ್ನು ಕಟ್‌ ಮಾಡಲು ನಿರಾಕರಿಸುವ ಮೂಲಕ ಅಜಿಂಕ್ಯ ರಹಾನೆ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಆಸ್ಟ್ರೇಲಿಯಾ ಆಟಗಾರರನ್ನು ಕಾಂಗರೂಗಳು ಎಂದೇ ಕರೆಯಲಾಗುತ್ತದೆ. ಆಸ್ಟ್ರೇಲಿಯಾ ಕಾಂಗರೂಗಳ ನಾಡೂ ಹೌದು. ಕಾಂಗರೂ ಆಸ್ಟ್ರೇಲಿಯಾದ ರಾಷ್ಟ್ರೀಯ ಪ್ರಾಣಿ. ಈ ಕೇಕ್‌ ಕತ್ತರಿಸಿ ಆ ದೇಶದ ಭಾವನೆಗಳಿಗೆ ಧಕ್ಕೆ ಮಾಡುವುದು ಬೇಡ ಎಂಬುವುದಾಗಿರಬಹುದು ಅವರ ಅಭಿಪ್ರಾಯ ಎಂದು ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಅವರು ಕೇಕ್‌ ಕತ್ತರಿಸುವ ಸಂದರ್ಭದಲ್ಲಿ ಮಹಿಳೆಯೋರ್ವರು ʼಕಾಂಗಾರೂ ಕೇಕ್‌ʼ ಎಂದು ಜೋರಾಗಿ ಕೂಗಿಕೊಂಡಾಗ ರಹಾನೆ ನಿರಾಕರಣೆಯ ಅರ್ಥದಲ್ಲಿ ತಲೆಯಾಡಿಸಿ ಸ್ಥಳದಿಂದ ತೆರಳುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಈ ಕುರಿತು ಸಾಮಾಜಿಕ ತಾಣದಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News