ಕಾಡಾನೆ ಮೇಲೆ ಉರಿಯುತ್ತಿರುವ ಟಯರ್ ಎಸೆದ ರೆಸಾರ್ಟ್ ಸಿಬ್ಬಂದಿ

Update: 2021-01-22 17:16 GMT

ಚೆನ್ನೈ, ಜ. 22: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಮಸಿನಗುಡಿಯ ಜನ ವಾಸದ ಪ್ರದೇಶಕ್ಕೆ ಬಂದ ಕಾಡಾನೆ ಮೇಲೆ ಅಲ್ಲಿನ ಖಾಸಗಿ ರೆಸಾರ್ಟ್‌ನ ಸಿಬ್ಬಂದಿಯೋರ್ವ ಉರಿಯುತ್ತಿರುವ ಟಯರ್ ಎಸೆದು ಹತ್ಯೆಗೈದ ಅಮಾನವೀಯ ಘಟನೆ ನಡೆದಿದೆ.

ಉರಿಯುತ್ತಿರುವ ಟಯರ್ ಎಸೆದ ಪರಿಣಾಮ ಗಂಭೀರ ಗಾಯಗೊಂಡು ಕಿವಿಯಲ್ಲಿ ರಕ್ತ ಸೋರುತ್ತಿರುವ ಸ್ಥಿತಿಯಲ್ಲಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಮಸಿನಗುಡಿಯಲ್ಲಿ ಪತ್ತೆ ಹಚ್ಚಿದ್ದರು. ಆದರೆ, ಮುದುಮಲೈಯಲ್ಲಿರುವ ಅರಣ್ಯ ವಲಯದಲ್ಲಿರುವ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯುವ ಮೊದಲೇ ಆನೆ ಸಾವನ್ನಪ್ಪಿತು. ಆನೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಅರಣ್ಯ ಅಧಿಕಾರಿಗಳು ವಿಶೇಷ ತಂಡವೊಂದನ್ನು ರೂಪಿಸಿ, ರೆಸಾರ್ಟ್‌ನ ಮಾಲಕ ರೇಮಂಡ್ ಹಾಗೂ ಸಿಬ್ಬಂದಿ ಪ್ರಶಾಂತ್‌ನನ್ನು ಬಂಧಿಸಲಾಗಿದೆ. ವಿಚಾರಣೆ ಸಂದರ್ಭ ಆನೆಯ ಮೇಲೆ ಉರಿಯುತ್ತಿರುವ ಟಯರ್ ಎಸೆಯುವ ವೀಡಿಯೊ ಅವರ ಮೊಬೈಲ್‌ನಲ್ಲಿ ಪತ್ತೆಯಾಗಿದೆ. ಘಟನೆಯ ವೀಡಿಯೊವನ್ನು ಅರಣ್ಯ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದೆ. ಕಟ್ಟಡವೊಂದರಿಂದ ಉರಿಯುತ್ತಿರುವ ಟಯರ್ ಅನ್ನು ಆನೆಯ ಮೇಲೆ ಎಸೆಯುತ್ತಿರುವುದು, ಅದರಿಂದ ಆನೆಯ ಕಿವಿಗೆ ಘಾಸಿಯಾಗಿರುವುದು, ತೀವ್ರ ನೋವಿನಿಂದ ಆನೆ ಓಡುತ್ತಿರುವುದು ವೀಡಿಯೊದಲ್ಲಿ ಕಂಡು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News