ತೈಲ ದರದಲ್ಲಿ ಸಾರ್ವಕಾಲಿಕ ದಾಖಲೆ ಹೆಚ್ಚಳ

Update: 2021-01-22 17:40 GMT

ಹೊಸದಿಲ್ಲಿ,ಜ.22: ತೈಲ ದರದಲ್ಲಿ ಶುಕ್ರವಾರ ಮತ್ತೆ ಹೆಚ್ಚಳವಾಗಿದ್ದು, ಸಾರ್ವಕಾಲಿಕ ದಾಖಲೆ ಏರಿಕೆಯನ್ನು ಕಂಡಿದೆ. ದಿಲ್ಲಿ, ಮುಂಬೈಸಹಿತ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 22ರಿಂದ 25 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆಯು ಪ್ರತಿ ಲೀಟರ್‌ಗೆ 23ರಿಂದ 27 ಪೈಸೆ ವರೆಗೆ ಹೆಚ್ಚಳವಾಗಿದೆ.

ಇದರೊಂದಿಗೆ ದಿಲ್ಲಿಯಲ್ಲಿ ಶುಕ್ರವಾರ ಪೆಟ್ರೋಲ್ ದರವು 85.45 ರೂ.ಗೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 92.04 ಆಗಿದ್ದು 24 ಪೈಸೆ ಹೆಚ್ಚಳವನ್ನು ಕಂಡಿದೆ. ಚೆನ್ನೈ, ಕೋಲ್ಕತ್ತಾಗಳಲ್ಲಿ ಪೆಟ್ರೋಲ್ ದರವು ಕ್ರಮವಾಗಿ ಲೀಟರ್‌ಗೆ 88.07 ರೂ. ಹಾಗೂ 86.87 ಆಗಿದೆ. ಡೀಸೆಲ್ ದರದಲ್ಲಿಯೂ ತೀವ್ರ ಹೆಚ್ಚಳವಾಗಿದ್ದು, ಮುಂಬೈನಲ್ಲಿ ಲೀಟರ್‌ಗೆ 82.13 ರೂ. ಆಗಿದ್ದು, 27 ಪೈಸೆ ಹೆಚ್ಚಳವಾಗಿದೆ. ದಿಲ್ಲಿಯಲ್ಲಿ ಡೀಸೆಲ್ ದರವು ಲೀಟರ್‌ಗೆ 75.63ಕ್ಕೆ ತಲುಪಿದ್ದು 25 ಪೈಸೆ ಹೆಚ್ಚಳವನ್ನು ಕಂಡಿದೆ.ಡೀಸೆಲ್ ಬೆಲೆ ಚೆನ್ನೈನಲ್ಲಿ ಲೀಟರ್‌ಗೆ 23 ಪೈಸೆ ಏರಿಕೆಯಾಗಿದ್ದು, 80.90 ರೂ.ಗೆ ತಲುಪಿದೆ. ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 26 ಪೈಸೆ ಏರಿಕೆಯಾಗಿದ್ದು, 79.23 ರೂ.ಗೆ ತಲುಪಿದೆ.

ಈ ವಾರದಲ್ಲಿ ತೈಲ ಬೆಲೆಗಳಲ್ಲಿ ಹೆಚ್ಚಳವಾಗಿರುವುದು ಇದು ಮೂರನೇ ಸಲವಾಗಿದೆ. ಸೋಮವಾರ ಹಾಗೂ ಮಂಗಳವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಸತತ 25 ಪೈಸೆವರೆಗೆ ಹೆಚ್ಚಳವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News