ಮುಕ್ತ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಕೋವಿಡ್ ಲಸಿಕೆ ಮಾರಾಟ ಇಲ್ಲ : ಕೇಂದ್ರ ಆರೋಗ್ಯ ಕಾರ್ಯದರ್ಶಿ

Update: 2021-01-23 03:54 GMT

ಪುಣೆ : ದೇಶದಲ್ಲಿ ಎರಡು ಕೋವಿಡ್-19 ಲಸಿಕೆಗಳ ನಿರ್ಬಂಧಿತ ಬಳಕೆಗೆ ಅನುಮೋದನೆ ನೀಡಲಾಗಿದ್ದು, ಸದ್ಯಕ್ಕೆ ಅದು ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.

ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಲಸಿಕೆ ಉತ್ಪಾದಕರಿಂದ ಕೇಳಿರುವ ಅಂಕಿ ಅಂಶಗಳನ್ನು ಅನುಮೋದಿಸದೇ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಿಲ್ಲ ಎಂದು ಹೇಳಿದರು.

ಲಸಿಕೆಯನ್ನು ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಾಲಮಿತಿ ನಿಗದಿಪಡಿಸಿಲ್ಲ. ಮುಂದಿನ ಏಳೆಂಟು ತಿಂಗಳಲ್ಲಿ ಆದ್ಯತೆಯ ಜನವರ್ಗವನ್ನು ತಲುಪುವುದು ಮಾತ್ರ ಸರ್ಕಾರದ ಗಮನ ಎಂದು ಅವರು ವಿವರಿಸಿದರು. ಭಾರತ ಅಥವಾ ವಿದೇಶದ ಮುಕ್ತ ಮಾರುಕಟ್ಟೆಗಳಲ್ಲಿ ಈ ಲಸಿಕೆಗಳನ್ನು ಮಾರಾಟ ಮಾಡಲು ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು. ಲಸಿಕೆಯ ಪರೀಕ್ಷಾ ಹಂತಗಳ ನಿಗದಿತ ಕಾಲಾವಧಿ ಮುಗಿದ ಬಳಿಕ ಮಾರುಕಟ್ಟೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ ಎಂದರು.

ಡಿಸಿಜಿಐ ಕೇಳಿರುವ ಅಂಕಿ ಅಂಶಗಳನ್ನು ನಿಗದಿತ ಕಾಲಘಟ್ಟದಲ್ಲಿ ಸಲ್ಲಿಸಲು ಲಸಿಕೆ ಉತ್ಪಾದಕರು ಬದ್ಧರಾಗಿದ್ದಾರೆ. ಇದನ್ನು ಪರಿಶೀಲನೆ ನಡೆಸಿದ ಬಳಿಕ ನಿಯಂತ್ರಕರು ಅನುಮೋದನೆ ನೀಡಲಿದ್ದಾರೆ. ಅತ್ಯುನ್ನತ ವೈದ್ಯಕೀಯ ಸಂಸ್ಥೆಗಳ ವಿವಿಧ ತಜ್ಞರು ಹೇಳುವಂತೆ ಅಂತಿಮ ಅನುಮೋದನೆಗೆ ಮುನ್ನ ಲಸಿಕೆಯ ಮೂರನೇ ಹಂತದ ಪರೀಕ್ಷೆಯ ದತ್ತಾಂಶಗಳು, ಹಲವು ತಿಂಗಳುಗಳ ಅನುಸರಣೆ ಅಗತ್ಯವಾಗುತ್ತದೆ. ಪೂರ್ಣ ಅನುಮತಿ ನೀಡುವುದು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಕ್ಕೆ ಅನುಸಾರವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News