ಜಮ್ಮು ಕಾಶ್ಮೀರ ಬಿಜೆಪಿಯ ರಾಜಕೀಯ ಪ್ರಯೋಗಾಲಯ : ಮೆಹಬೂಬಾ ಮುಫ್ತಿ

Update: 2021-01-23 04:45 GMT

ಶ್ರೀನಗರ : ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷ ಸಂವಿಧಾನವನ್ನು ನಾಶಪಡಿಸಿ, ಜಮ್ಮು ಮತ್ತು ಕಾಶ್ಮೀರವನ್ನು ತನ್ನ ರಾಜಕೀಯ ಪ್ರಯೋಗಾಲಯವನ್ನಾಗಿ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪ ಮಾಡಿದ್ದಾರೆ.

ಆ ಪಕ್ಷದ ಜತೆ ಮತ್ತೆಂದೂ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಜತೆ ಹಿಂದೆ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಮೈತ್ರಿ ಮಾಡಿಕೊಂಡದ್ದು, ತಂದೆಯ ಯೋಚನೆಯಾಗಿತ್ತು ಎಂದು ಅವರು ಹೇಳಿದರು.

"ವಿಸ್ತೃತ ಒಳಿತಿಗಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದು ನನ್ನ ತಂದೆ (ಮುಫ್ತಿ ಮೊಹ್ಮದ್ ಸಯೀದ್)ಯವರ ಕಲ್ಪನೆಯಾಗಿತ್ತು. ಅದನ್ನು ನಾನು ಗೌರವಿಸುತ್ತೇನೆ. ಅದು ಅಲ್ಲಿಗೆ ಮುಗಿಯಿತು. ಅದರಿಂದಾಚೆಗೆ ಮುಂದುವರಿಯುವುದಿಲ್ಲ" ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದರು. ಮೈತ್ರಿ ಬಗ್ಗೆ ತಮಗೆ ಮನಸ್ಸು ಇರಲಿಲ್ಲ ಎಂಬ ಸುಳಿವನ್ನೂ ಮುಫ್ತಿ ನೀಡಿದರು.

"ನನ್ನ ತಂದೆ ಕೇವಲ ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತ್ರವಲ್ಲದೇ ದೇಶದ ಬಗ್ಗೆಯೂ ರಾಜಕೀಯ ದೂರದೃಷ್ಟಿ ಹೊಂದಿದ್ದರು. ನಾವು ಈಗಾಗಲೇ ಹೊಂದಿರುವುದು ಸುಭದ್ರವಾಗಿರಬೇಕು ಹಾಗೂ ಕಾಶ್ಮೀರ ಸಮಸ್ಯೆ ಶಾಂತಿಯುತವಾಗಿ ಮತ್ತು ಗೌರವಯುತವಾಗಿ ಮುಗಿಯಬೇಕು ಎಂಬ ಉದ್ದೇಶದಿಂದ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ವೇಳೆ ತಮ್ಮ ವಿಶ್ವಾಸಾರ್ಹತೆಯನ್ನೂ ಪಣಕ್ಕಿಟ್ಟೆವು. ನಾನು ಬಿಜೆಪಿಯ ಅಭಿಮಾನಿ ಅಲ್ಲದಿದ್ದರೂ, ಅವರ ನಿರ್ಧಾರದಿಂದ ಹೊರ ನಡೆಯುವಂತಿರಲಿಲ್ಲ" ಎಂದು ವಿವರಿಸಿದರು.

ಬಿಜೆಪಿ ಪ್ರತಿಯೊಂದನ್ನೂ ಕ್ಷುಲ್ಲಕ ಚುನಾವಣಾ ಲಾಭದ ದೃಷ್ಟಿಯಿಂದಷ್ಟೇ ನೋಡುತ್ತದೆ. ದೇಶದ ಸಮಸ್ಯೆಗಳನ್ನು ಬಗೆಹರಿಸುವ ಅಥವಾ ದೇಶವನ್ನು ಕಟ್ಟುವ ವಿಚಾರದಲ್ಲಿ ಯಾವುದೇ ದೂರದೃಷ್ಟಿ ಇಲ್ಲ. ಇದರ ಬದಲಾಗಿ ದೇಶವನ್ನು ಮತ್ತೆ ಕತ್ತಲೆಗೆ, ವಿಭಜನೆಗೆ ಮತ್ತು ಧರ್ಮಾಂಧತೆಗೆ, ಅಲ್ಪಸಂಖ್ಯಾತರ ಬಗ್ಗೆ ದ್ವೇಷವನ್ನು ಬಿತ್ತುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ. ದುರಾದೃಷ್ಟವಶಾತ್ ಜಮ್ಮು ಮತ್ತು ಕಾಶ್ಮೀರ ರಾಜಕೀಯ ಪ್ರಯೋಗಾಲಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News