ಜಮ್ಮು-ಕಾಶ್ಮೀರದ ಅಂತರ್ ರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಭೂಗತ ಸುರಂಗ ಪತ್ತೆ ಹಚ್ಚಿದ ಬಿಎಸ್ಎಫ್

Update: 2021-01-23 11:51 GMT

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಅಂತರ್ ರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್)ಶನಿವಾರ ಮತ್ತೊಂದು ಭೂಗತ ಸುರಂಗವನ್ನು ಪತ್ತೆ ಹಚ್ಚಿದೆ. ಹತ್ತು ದಿನಗಳ ಹಿಂದೆ ಇದೇ ರೀತಿಯ ಸುರಂಗವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿದ್ದವು.

ರಹಸ್ಯ ಸುರಂಗವು ಸುಮಾರು 30 ಅಡಿ ಆಳ, ಮೂರು ಅಡಿ ವ್ಯಾಸ ಹಾಗೂ 150 ಮೀಟರ್ ಉದ್ದ ಇದೆ. ಈ ಸುರಂಗ ಪಾಕಿಸ್ತಾನ ಕಡೆಯಿಂದ ಆರಂಭವಾಗಿದೆ ಎಂದು ನಂಬಲಾಗಿದೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿರಾನಗರ ಸೆಕ್ಟರ್ ನ ಗಡಿ ಹೊರಠಾಣೆ(ಬಿಒಪಿ)ಪನ್ಸಾರ್ ಪ್ರದೇಶದಲ್ಲಿ, ಶಕರ್ ಗಡದ ಅಭಿಯಾಲ್-ಡೋಗ್ರಾ ಹಾಗೂ  ಕಿಂಗ್ರೆ-ಡಿ-ಕೊಥೆಯ  ಎದುರು ಸುರಂಗ ವಿರೋಧಿ ಕಾರ್ಯಾಚರಣೆಯ ಸಂದರ್ಭದಲ್ಲಿ ಈ ಸುರಂಗ ಪತ್ತೆಯಾಗಿದೆ ಎಂದು ಗಡಿ ಕಾವಲು ಪಡೆ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

2019ರ  ನವೆಂಬರ್ ನಲ್ಲಿ ಇದೇ ಪ್ರದೇಶದಲ್ಲಿ ಸೈನ್ಯವು ಒಳ ನುಸುಳುವಿಕೆಯನ್ನು ವಿಫಲಗೊಳಿಸಿತ್ತು. ಆಗ ಬಿಎಸ್ಎಫ್ ಭಾರತಕ್ಕೆ ಒಳ ನುಸುಳಲು ಪ್ರಯತ್ನಿಸುತ್ತಿದ್ದವರ ಮೇಲೆ ಗುಂಡು ಹಾರಿಸಿತ್ತು.

 ಕಳೆದ 6 ತಿಂಗಳಲ್ಲಿ ಪತ್ತೆಯಾದ ನಾಲ್ಕನೇ ಸುರಂಗ ಇದಾಗಿದೆ. ಈ ಹಿಂದೆ ಸಾಂಬಾ, ಹಿರಾನಗರ್  ಹಾಗೂ ಕಥುವಾ ಪ್ರದೇಶಗಳಲ್ಲಿ ಸುರಂಗಗಳು ಪತ್ತೆಯಾಗಿದ್ದವು. ಜಮ್ಮು ವಲಯದಲ್ಲಿ ಈ ತನಕ 10 ಸುರಂಗಗಳು ಪತ್ತೆ ಹಚ್ಚಲಾಗಿದೆ. ಜನವರಿ 13ರಂದು ಜಮ್ಮು ವಲಯದ ಬೊಬಿಯಾನ್ ಗ್ರಾಮದಲ್ಲಿ 150  ಮೀಟರ್ ಉದ್ದದ ಸುರಂಗ ಪತ್ತೆಯಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News