ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಮಾನಿಸಬೇಡಿ: ಪ್ರಧಾನಿಯಿದ್ದ ವೇದಿಕೆಯಲ್ಲಿಯೇ ಮಮತಾ ಗುಡುಗು

Update: 2021-01-23 18:04 GMT

ಕೋಲ್ಕತಾ,ಜ.23: ಇಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದ ನೇತಾಜಿ ಸುಭಾಷ್ ಚಂದ್ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಘೋಷಣೆಗಳು ಕೇಳಿಬಂದ ನಂತರ ತಾಳ್ಮೆಯನ್ನು ಕಳೆದುಕೊಂಡ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನ್ನ ಭಾಷಣವನ್ನು ಮುಂದುವರಿಸಲು ನಿರಾಕರಿಸಿದರು.

ವಿಕ್ಟೋರಿಯಾ ಮೆಮೋರಿಯಲ್‌ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ.ಬಂಗಾಳದ ರಾಜ್ಯಪಾಲ ಜಗದೀಪ ಧಂಕರ್ ಅವರೂ ಉಪಸ್ಥಿತರಿದ್ದರು.

ತನ್ನ ಸರದಿ ಬರುತ್ತಿದ್ದಂತೆ ಬ್ಯಾನರ್ಜಿ ಭಾಷಣವನ್ನು ಆರಂಭಿಸಿದಾಗ ಸಭಿಕರಲ್ಲಿ ಕೆಲವರು ಜೈ ಶ್ರೀರಾಮ ಘೋಷಣೆಗಳನ್ನು ಕೂಗತೊಡಗಿದ್ದರು. ಘೋಷಣೆಗಳನ್ನು ಕೂಗದಂತೆ ಮತ್ತು ಬ್ಯಾನರ್ಜಿಯವರಿಗೆ ಭಾಷಣ ಮಾಡಲು ಅವಕಾಶ ನೀಡುವಂತೆ ಸಂಘಟಕರು ಜನರನ್ನು ಕೋರಿಕೊಂಡಿದ್ದರು. ಆದರೆ ಘಟನೆಯಿಂದ ತೀವ್ರವಾಗಿ ಕೆರಳಿದ್ದ ಬ್ಯಾನರ್ಜಿ ಇದನ್ನು ತೀವ್ರವಾಗಿ ಆಕ್ಷೇಪಿಸಿ,ಸರಕಾರಿ ಕಾರ್ಯಕ್ರಮಕ್ಕೆ ಯಾರನ್ನಾದರೂ ಆಹ್ವಾನಿಸಿದರೆ ಅವರನ್ನು ಅವಮಾನಿಸಬಾರದು ಎಂದು ಹೇಳಿದರು.

‘ಸರಕಾರದ ಕಾರ್ಯಕ್ರಮಗಳು ಘನತೆಯಿಂದ ಕೂಡಿರಬೇಕು ಎಂದು ನಾನು ಭಾವಿಸಿದ್ದೇನೆ. ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಇದು ಸರಕಾರಿ ಕಾರ್ಯಕ್ರಮವಾಗಿದ್ದು,ಎಲ್ಲ ಪಕ್ಷಗಳು ಮತ್ತು ಜನರು ಭಾಗಿಯಾಗಿದ್ದಾರೆ. ಯಾರನ್ನಾದರೂ ಆಹ್ವಾನಿಸಿದ ಬಳಿಕ ಅವರನ್ನು ಅವಮಾನಿಸುವುದು ನಿಮಗೆ ಶೋಭೆ ತರುವುದಿಲ್ಲ. ಪ್ರತಿಭಟನೆಯ ದ್ಯೋತಕವಾಗಿ ನಾನು ಮುಂದೆ ಮಾತನಾಡುವುದಿಲ್ಲ. ಜೈ ಹಿಂದ್,ಜೈ ಬಾಂಗ್ಲಾ ’ಎಂದು ಹೇಳುವ ಮೂಲಕ ಬ್ಯಾನರ್ಜಿ ತನ್ನ ಭಾಷಣವನ್ನು ಮೊಟಕುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News