ನೇತಾಜಿ ಜನ್ಮ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಿ: ಕೇಂದ್ರ ಸರಕಾರಕ್ಕೆ ಮಮತಾ ಬ್ಯಾನರ್ಜಿ ಆಗ್ರಹ

Update: 2021-01-23 17:54 GMT

ಕೋಲ್ಕತ್ತಾ, ಜ. 23: ಸ್ವಾತಂತ್ರ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನವಾದ ಶನಿವಾರ ಕೋಲ್ಕತ್ತಾದಲ್ಲಿ ಅವರಿಗೆ ಗೌರವ ಸಲ್ಲಿಸಿದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಸರಕಾರ ಜನವರಿ 23ನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸುವಂತೆ ಆಗ್ರಹಿಸಿದ್ದಾರೆ.

ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸಲು ಮಮತಾ ಬ್ಯಾನರ್ಜಿ ಅವರು ಶನಿವಾರ ಕೋಲ್ಕತ್ತಾದಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘‘ನಾವು ಚುನಾವಣೆ ನಡೆಯುವ ವರ್ಷದಲ್ಲಿ ಮಾತ್ರ ನೇತಾಜಿ ಅವರ ಜನ್ಮ ದಿನ ಆಚರಿಸಬಾರದು. ಈಗ ನಾವು ಅವರ 125ನೇ ಜನ್ಮ ದಿನಾಚರಣೆಯನ್ನು ಭವ್ಯವಾಗಿ ಆಚರಿಸುತ್ತಿದ್ದೇವೆ. ರವೀಂದ್ರನಾಥ್ ಠಾಗೂರ್ ಅವರು ನೇತಾಜಿ ಅವರನ್ನು ‘ದೇಶನಾಯಕ’ ಎಂದು ಕರೆದಿದ್ದರು. ಇದೇ ಕಾರಣಕ್ಕೆ ನೇತಾಜಿ ಅವರ ಜನ್ಮ ದಿನವನ್ನು ‘ದೇಶನಾಯಕ ದಿವಸ’ವೆಂದು ಆಚರಿಸಲು ನಾವು ನಿರ್ಧರಿಸಿದೆವು’’ ಎಂದರು.

ನೇತಾಜಿ ಅವರು ದೇಶದ ಅತಿ ಶ್ರೇಷ್ಠ ಸ್ವಾತಂತ್ರ ಹೋರಾಟಗಾರರು. ಅವರು ಶ್ರೇಷ್ಠ ತತ್ವಶಾಸ್ತ್ರಜ್ಞ ಎಂದು ಮಮತಾ ಬ್ಯಾನರ್ಜಿ ಹೇಳಿದರು. ‘‘ಅಝಾದ್ ಹಿಂದ್ ಫೌಜ್ ಹೆಸರಿನಲ್ಲಿ ಸ್ಮಾರಕವನ್ನು ರಾಜರ್ಹತ್‌ನಲ್ಲಿ ನಿರ್ಮಿಸಲಾಗುವುದು. ನೇತಾಜಿ ಅವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಆರಂಭಿಸಲಾಗುತ್ತಿದೆ. ಅದು ರಾಜ್ಯದಿಂದ ಧನ ಸಹಾಯ ಪಡೆಯಲಿದೆ ಹಾಗೂ ವಿದೇಶಿ ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ’’ ಎಂದು ಮಮತಾ ಬ್ಯಾನರ್ಜಿ ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News