ಸೋಮವಾರ ನಡೆಯಲಿರುವ ರ‍್ಯಾಲಿಗೆ ನಾಸಿಕ್ ನಿಂದ ಮುಂಬೈನತ್ತ ಹರಿದು ಬಂದ ಸಾವಿರಾರು ರೈತರು

Update: 2021-01-24 15:45 GMT

ಮುಂಬೈ,ಜ.24: ಕೇಂದ್ರದ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ಸೋಮವಾರ ಮುಂಬೈನ ಆಝಾದ್ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಲು ಮಹಾರಾಷ್ಟ್ರದ ವಿವಿಧೆಡೆಗಳಿಂದ ಸಾವಿರಾರು ರೈತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಶನಿವಾರ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 15,000 ರೈತರು ನಾಸಿಕ್‌ನಲ್ಲಿ ಜಮಾಯಿಸಿ ಅಲ್ಲಿಂದ ಹಲವಾರು ಟೆಂಪೋಗಳು ಮತ್ತು ಇತರ ವಾಹನಗಳಲ್ಲಿ ಮುಂಬೈಗೆ ಪ್ರಯಾಣ ಆರಂಭಿಸಿದ್ದಾರೆ. ಮಾರ್ಗಮಧ್ಯೆ ಇನ್ನೂ ಹಲವಾರು ರೈತರು ಅವರನ್ನು ಸೇರಿಕೊಂಡಿದ್ದಾರೆ ಎಂದು ಅಖಿಲ ಭಾರತ ಕಿಸಾನ ಸಭಾ (ಎಐಕೆಎಸ್)ದ ಮಹಾರಾಷ್ಟ್ರ ಘಟಕವು ರವಿವಾರ ಹೇಳಿಕೆಯಲ್ಲಿ ತಿಳಿಸಿದೆ. ಸೋಮವಾರ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮತ್ತು ಆಡಳಿತಾರೂಢ ಮಹಾ ವಿಕಾಸ ಅಘಾಡಿ (ಎಂವಿಎ)ಯ ಇತರ ನಾಯಕರು ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅದು ಹೇಳಿದೆ. ಅಘಾಡಿಯ ಅಂಗವಾಗಿರುವ ಕಾಂಗ್ರೆಸ್ ಈಗಾಗಲೇ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದೆ.

ರವಿವಾರ ಬೆಳಿಗ್ಗೆ ಹಲವಾರು ರೈತರು ಕಸಾರಾ ಘಾಟ್‌ ಮೂಲಕ ಮುಂಬೈನತ್ತ ಕಾಲ್ನಡಿಗೆಯ ಜಾಥಾದಲ್ಲಿ ತೆರಳಿದ್ದು,ಇತರ ಹಲವರು ವಾಹನಗಳಲ್ಲಿ ತೆರಳಿದ್ದಾರೆ.

ಕಳೆದ ಎರಡು ತಿಂಗಳುಗಳಿಂದಲೂ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಲು ಮತ್ತು ವಿಸ್ತರಿಸಲು ಈ ರ‍್ಯಾಲಿಯನ್ನು ನಡೆಸಲಾಗುತ್ತಿದೆ ಎಂದು ಎಐಕೆಎಸ್ ತಿಳಿಸಿದೆ.

ಸಂಯುಕ್ತ ಕಿಸಾನ್ ಮೋರ್ಚಾ ಜ.23ರಿಂದ 26ರವರೆಗೆ ರಾಜ್ಯಗಳಲ್ಲಿಯ ರಾಜಭವನಗಳಿಗೆ ರ‍್ಯಾಲಿಗಳು ಸೇರಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಕರೆ ನೀಡಿದೆ.

ಸೋಮವಾರ ರೈತರು ಆಝಾದ್ ಮೈದಾನದಿಂದ ರಾಜಭವನಕ್ಕೆ ಜಾಥಾದಲ್ಲಿ ತೆರಳಿ ರಾಜ್ಯಪಾಲ ಬಿ.ಎಸ್.ಕೋಷಿಯಾರಿ ಅವರಿಗೆ ಅಹವಾಲನ್ನು ಸಲ್ಲಿಸಲಿದ್ದಾರೆ.

ಗಣತಂತ್ರ ದಿನವಾದ ಜ.26ರಂದು ರೈತರು ಆಝಾದ್ ಮೈದಾನದಲ್ಲಿ ರಾಷ್ಟ್ರಧ್ವಜಾರೋಹಣವನ್ನೂ ನಡೆಸಲಿದ್ದಾರೆ ಮತ್ತು ಕೃಷಿಕರು ಹಾಗೂ ಕೃಷಿಕಾರ್ಮಿಕರ ಹೋರಾಟವನ್ನು ಯಶಸ್ವಿಯಾಗಿಸಲು ಪಣ ತೊಡಲಿದ್ದಾರೆ ಎಂದು ಸಂಯುಕ್ತ ಶೇತ್ಕರಿ ಕಾಮಗಾರ್ ಮೋರ್ಚಾ ಮಹಾರಾಷ್ಟ್ರವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News