ಕೋವಿಡ್ ಸಂತ್ರಸ್ತರ ಶವ ಸಂಸ್ಕಾರಕ್ಕೆ ಪುರೋಹಿತರಿಂದ ಸುಲಿಗೆ

Update: 2021-01-24 14:54 GMT

ಜೊಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಜ. 24: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸಲು ದಕ್ಷಿಣ ಆಫ್ರಿಕದ ಕೆಲವು ಹಿಂದೂ ಪುರೋಹಿತರು ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಡರ್ಬಾನ್ ನಗರದ ಕ್ಲೇರ್ ಎಸ್ಟೇಟ್ ಚಿತಾಗಾರದ ಮ್ಯಾನೇಜರ್ ಪ್ರದೀಪ್ ರಾಮ್‌ಲಾಲ್, ಹಣ ಸುಲಿಗೆ ಮಾಡುತ್ತಿರುವ ಪುರೋಹಿತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಸಂಬಂಧ, ಕೊರೋನ ವೈರಸ್‌ನಿಂದಾಗಿ ಮೃತಪಟ್ಟಿರುವ ಜನರ ಕುಟುಂಬಿಕರಿಂದ ಹಲವಾರು ದೂರುಗಳು ಬಂದಿವೆ ಎಂದು ದಕ್ಷಿಣ ಆಫ್ರಿಕದ ಹಿಂದೂ ಧರ್ಮ ಅಸೋಸಿಯೇಶನ್‌ನ ಸದಸ್ಯರೂ ಆಗಿರುವ ರಾಮ್‌ಲಾಲ್ ಹೇಳಿದರು.

 ಇತ್ತೀಚಿನ ವಾರಗಳಲ್ಲಿ, ಎರಡನೇ ಕೊರೋನ ಅಲೆ ಮತ್ತು ವೈರಸ್‌ನ ರೂಪಾಂತರಿತ ಪ್ರಭೇದದ ದಾಳಿಗೆ ಒಳಗಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದ ಹಿನ್ನೆಲೆಯಲ್ಲಿ, ಚಿತಾಗಾರವನ್ನು ಎರಡು ಪಾಳಿಗಳಲ್ಲಿ ನಡೆಸಲಾಗುತ್ತಿತ್ತು.

ದಕ್ಷಿಣ ಆಫ್ರಿಕದಲ್ಲಿ ಭಾರತ-ಮೂಲದವರ ಜನಸಂಖ್ಯೆ ಸುಮಾರು 14 ಲಕ್ಷ. ಈ ಪೈಕಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಜನರು ಡರ್ಬಾನ್ ನಗರದಲ್ಲಿ ವಾಸಿಸುತ್ತಿದ್ದಾರೆ.

 ‘‘ಪುರೋಹಿತರು ಒಂದು ಶವ ಸಂಸ್ಕಾರ ನಡೆಸಲು 1,200 ರ‍್ಯಾಡ್ (ಸುಮಾರು 5,800 ರೂಪಾಯಿ)ನಿಂದ 2,000 ರ‍್ಯಾಡ್ (ಸುಮಾರು 9,635 ರೂಪಾಯಿ)ವರೆಗೆ ವಸೂಲಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಪುರಾಣಗಳ ಪ್ರಕಾರ, ಇದು ನಾವು ಸಮುದಾಯಕ್ಕೆ ಮಾಡುವ ಸೇವೆಯಾಗಿದೆ. ಕುಟುಂಬವೊಂದು ಪುರೋಹಿತರಿಗೆ ದೇಣಿಗೆ ನೀಡಲು ಬಯಸಿದರೆ ಅದು ಸ್ವೀಕಾರಾರ್ಹ. ಆದರೆ, ಪುರೋಹಿತರು ಜನರಿಂದ ಹಣ ವಸೂಲು ಮಾಡಬಾರದು’’ ಎಂದು ‘ವೀಕ್ಲಿ ಪೋಸ್ಟ್’ ಪತ್ರಿಕೆಯೊಂದಿಗೆ ಮಾತನಾಡಿದ ರಾಮ್‌ಲಾಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News