4 ವರ್ಷ 30,573 ಸುಳ್ಳು ಹೇಳಿದ ಟ್ರಂಪ್!

Update: 2021-01-24 15:00 GMT

ವಾಶಿಂಗ್ಟನ್, ಜ. 24: ಅವೆುರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 30,573 ಸುಳ್ಳುಗಳನ್ನು ಹೇಳಿದ್ದಾರೆ. ಈ ಪೈಕಿ ಸುಮಾರು ಅರ್ಧದಷ್ಟು ಅವರ ಕೊನೆಯ ವರ್ಷದಲ್ಲಿ ಬಂದಿದೆ.

ಎರಡೂ ಪಕ್ಷಗಳ ರಾಜಕಾರಣಿಗಳು ನೀಡಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ‘ಫ್ಯಾಕ್ಟ್ ಚೆಕರ್’ 10 ವರ್ಷಗಳಿಗೂ ಹೆಚ್ಚು ಸಮಯದಿಂದ ಪರಿಶೀಲಿಸುತ್ತಾ ಬಂದಿದೆ. ಆದರೆ ಸದಾ ವಾಸ್ತವಾಂಶಗಳನ್ನು ಗಾಳಿಗೆ ತೂರುತ್ತಾ ಸುಳ್ಳುಗಳನ್ನೇ ಹೇಳಿಕೊಂಡು ಬರುವ ಟ್ರಂಪ್ ‘ಫ್ಯಾಕ್ಟ್ ಚೆಕರ್’ಗೆ ಹೊಸ ಸವಾಲಾಗಿದ್ದರು. ಅವರ ಹೆಚ್ಚಿನ ಸುಳ್ಳು ಹೇಳಿಕೆಗಳು ಸತ್ಯಾಸತ್ಯತೆ ಪರಿಶೀಲನೆಯ ಅರ್ಹತೆಯನ್ನೇ ಪಡೆದುಕೊಂಡಿರಲಿಲ್ಲ ಎಂದು ‘ವಾಶಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.

ಪತ್ರಿಕೆಯು ಆರಂಭದಲ್ಲಿ ವಾರಕ್ಕೊಮ್ಮೆ ‘ಈ ವಾರ ಟ್ರಂಪ್ ಟ್ವಿಟರ್‌ನಲ್ಲಿ ಯಾವ ಸುಳ್ಳು ಹೇಳಿದರು’ ಎಂಬ ಅಂಕಣವನ್ನು ಪ್ರಕಟಿಸಿತು. ಬಳಿಕ ಅದು ‘ಟ್ರಂಪ್‌ರ ಮೊದಲ ನೂರು ದಿನಗಳು’ ಆಗಿ ಪರಿವರ್ತನೆಗೊಂಡಿತು. ಬಳಿಕ, ಓದುಗರ ಮನವಿಗಳಿಗೆ ಪೂರಕವಾಗಿ, ಟ್ರಂಪ್‌ಗೆ ಸಂಬಂಧಿಸಿದ ಮಾಹಿತಿ ಕೋಶವನ್ನು ನಾಲ್ಕು ವರ್ಷಗಳವರೆಗೆ ಪತ್ರಿಕೆಯು ನಿರ್ವಹಿಸಿಕೊಂಡು ಬಂತು.

ಮುಂದಿನ ಅಧ್ಯಕ್ಷರ ಮೇಲೆ ‘ಸುಳ್ಳು ಪತ್ತೆಗಾಗಿ’ ನಿಗಾ ಇಡುವುದು ಅಗತ್ಯವೇ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಟ್ರಂಪ್‌ರ ಆಟಾಟೋಪದ ಮಾತುಗಳು ಮುಂದಿನ ಹಲವು ವರ್ಷಗಳವರೆಗೆ ಮಾರ್ದನಿಸುವುದರಲ್ಲಿ ಸಂಶಯವಿಲ್ಲ ಎಂದು ಪತ್ರಿಕೆ ಹೇಳಿದೆ.

ಪ್ರತಿ ವರ್ಷ ಏರಿದ ಸುಳ್ಳುಗಳ ಸಂಖ್ಯೆ

ಟ್ರಂಪ್ ತನ್ನ ಅಧ್ಯಕ್ಷಗಿರಿಯ ಮೊದಲ ವರ್ಷದಲ್ಲಿ ದಿನಕ್ಕೆ ಸರಾಸರಿ 6 ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದರು. ಎರಡನೇ ವರ್ಷದಲ್ಲಿ ಈ ಸಂಖ್ಯೆ ದಿನಕ್ಕೆ 16ಕ್ಕೆ ಏರಿತು. ಮೂರನೇ ವರ್ಷದಲ್ಲಿ ಅವರು ದಿನಕ್ಕೆ ಸರಾಸರಿ 22 ಸುಳ್ಳುಗಳನ್ನು ಹೇಳಿದರು. ನಾಲ್ಕನೇ ವರ್ಷದಲ್ಲಿ ಈ ಸಂಖ್ಯೆ ದಿನಕ್ಕೆ 39ಕ್ಕೆ ತಲುಪಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News