ಮುಖ್ಯಮಂತ್ರಿ ಕುರ್ಚಿ ಕಳೆದುಕೊಳ್ಳುವ ಸುಳಿವು ನೀಡಿದ ನಿತೀಶ್ ಕುಮಾರ್

Update: 2021-01-24 18:22 GMT

ಪಾಟ್ನಾ: ಹಿರಿಯ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರ ರೀತಿ ನಾನು ಕೂಡ ಎಲ್ಲ ಸಮಾಜದ ಕಲ್ಯಾಣ ಹಾಗೂ ಪ್ರಗತಿಗಾಗಿ ಕೆಲಸ ಮಾಡುತ್ತಿದ್ದೇನೆ, ಠಾಕೂರ್ ರೀತಿ ನನ್ನನ್ನೂ ಮಧ್ಯದಲ್ಲೇ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರವಿವಾರ ಹೇಳಿದ್ದಾರೆ. ಈ ಮೂಲಕ ತಾನು ಮುಖ್ಯಮಂತ್ರಿ ಕುರ್ಚಿ ಕಳೆದುಕೊಳ್ಳಬಹುದು ಎಂದು ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

“ಕರ್ಪೂರಿ ಠಾಕೂರ್ ಜೀ, ಮುಖ್ಯಮಂತ್ರಿಯಾಗಿದ್ದುಕೊಂಡು  ಸಮಾಜದ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಕೆಲಸ ಮಾಡಿದ್ದರು. ಆದರೆ ಅವರನ್ನು ಎರಡೇ ವರ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಾಯಿತು. ನಾವು ಕೂಡ ಸಮಾಜದ ಎಲ್ಲ ವರ್ಗಗಳ ಏಳಿಗೆಗಾಗಿ ಕೆಲಸ ಮಾಡುತ್ತಿದ್ದೇವೆ.  ಸಮಾಜದ ಎಲ್ಲ ವರ್ಗದವರ ಹಿತಾಸಕ್ತಿಗಾಗಿ ಕೆಲಸ ಮಾಡಿದರೆ ಕೆಲವರು ಕೆರಳುತ್ತಾರೆ'' ಎಂದು ಜೆಡಿಯು ಕಚೇರಿಯಲ್ಲಿ ಜನ ನಾಯಕ ಕರ್ಪೂರಿ ಠಾಕೂರ್ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಡ ಕುಟುಂಬದಲ್ಲಿ ಜನಿಸಿದ್ದ ಠಾಕೂರ್ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿ ಅವರು 1970ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.  ಅದರೆ ಅವರು ಆರು ತಿಂಗಳಲ್ಲಿ ಜೂನ್ 2,1971ರಲ್ಲಿ ತಮ್ಮ ಸ್ಥಾನ ತ್ಯಜಿಸಿದರು. ಅವರು 1977ರ ಜೂ.24ರಂದು ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಆದರೆ ಮತ್ತೊಮ್ಮೆ ತಮ್ಮ ಅವಧಿ ಪೂರೈಸದೆ ಎಪ್ರಿಲ್ 21,1979ರಲ್ಲಿ ಸಿಎಂ ಪದವಿಯನ್ನು ತ್ಯಜಿಸಿದರು.  ನಿತೀಶ್ ಅವರು ಠಾಕೂರ್ ಎರಡನೇ ಅವಧಿಗೆ ಸಿಎಂ ಆಗಿದ್ದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News