ದಿಲ್ಲಿಯ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿರುವ ಆತ್ಮಹತ್ಯೆಗೈದ ರೈತರ ಪತ್ನಿಯರು

Update: 2021-01-24 18:13 GMT

ಮುಂಬೈ, ಜ. 24: ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರದ ವಿದರ್ಭದ ಆತ್ಮಹತ್ಯೆಗೈದ ರೈತರ ಪತ್ನಿಯರ ಗುಂಪೊಂದು ಆಗಮಿಸಿದೆ.

ಜನವರಿ 26ರಂದು ಗಣರಾಜ್ಯೋತ್ಸವದ ದಿನ ನಡೆಸಲು ಉದ್ದೇಶಿಸಿರುವ ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ 30ರಿಂದ 40ರ ವಯೋಮಾನದ ಕನಿಷ್ಠ 60 ರೈತ ಪತ್ನಿಯರು ಪಾಲ್ಗೊಳ್ಳಲಿದ್ದಾರೆ.

 ಹೊಸದಿಲ್ಲಿಯ ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ವೇದಿಕೆಯಲ್ಲಿ ರವಿವಾರ ರೈತ ವಿಧವೆ ಭಾರತಿ ಪವಾರ್ ಬೆಳೆ ನಾಶದಿಂದ ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ತನ್ನ ಪತಿಯ ಭಾವಚಿತ್ರವನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪವಾರ್ ಅವರು, ‘‘ನಾನು ಮಹಾರಾಷ್ಟ್ರದ ವಿದರ್ಭ ವಲಯದ ಯವಾತ್ಮಲ್ ಜಿಲ್ಲೆಯ ಕೇಳಾಪುರ ತಾಲೂಕಿನಿಂದ ಆಗಮಿಸಿದ್ದೇನೆ. ಆ ಜಿಲ್ಲೆ ಹಾಗೂ ತಾಲೂಕಿನಲ್ಲಿ ಅತ್ಯಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇಂದ್ರ ಸರಕಾರ ಜಾರಿಗೆ ತಂದ ಈ ಮೂರು ವಿವಾದಾತ್ಮಕ ಕಾಯ್ದೆಗಳು ರೈತರನ್ನು ಆರ್ಥಿಕ ಬಿಕ್ಕಟ್ಟಿನ ಸುಳಿಯಲ್ಲಿ ಸಿಲುಕಿಸಲಿದೆ ಎಂಬುದನ್ನು ನಾನು ನಿಮ್ಮಿಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ’’ ಎಂದರು.

‘‘ಪಂಜಾಬ್‌ನ ರೈತರಿಗೆ ಬೆಂಬಲ ವ್ಯಕ್ತಪಡಿಸಲು ನಾನು ಇಂದು ಇಲ್ಲಿ ನಿಂತಿದ್ದೇನೆ. ಮಹಾರಾಷ್ಟ್ರದ ದುರಂತಕ್ಕೆ ನಾವು ಸಾಕ್ಷಿಯಾದಂತೆ ಪಂಜಾಬ್‌ನ ನನ್ನ ಸಹೋದರಿಯರು ದುರಂತಕ್ಕೆ ಸಾಕ್ಷಿಯಾಗುವುದನ್ನು ನಾನು ಬಯಸಲಾರೆ’’ ಎಂದು ಅವರು ಹೇಳಿದ್ದಾರೆ.

ಬೇಡಿಕೆಗಳನ್ನು ತಿರಸ್ಕರಿಸುವ ಮೂಲಕ ರೈತರನ್ನು ಇಂತಹ ಸಂಕಷ್ಟಗಳಿಗೆ ಒಳಪಡಿಸುತ್ತಿದ್ದರೆ, ಅಂತಹ ಕೇಂದ್ರ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ಹಕ್ಕು ಇಲ್ಲ ಎಂದು ಅವರು ಹೇಳಿದ್ದಾರೆ.

‘‘ಮಹಿಳೆಯರಾದ ನಮಗೆ ದುರಂತದ ಅನುಭವವಿದೆ. ರೈತ ಆತ್ಮಹತ್ಯೆ ಮಾಡಿಕೊಂಡರೆ ಸಂಪೂರ್ಣ ಕುಟುಂಬದ ಮೇಲೆ ಪರಿಣಾಮ ಉಂಟಾಗುತ್ತದೆ. ಇಂತಹ ಘಟನೆಯಿಂದ ಸಣ್ಣ ಮಕ್ಕಳು ಹಾಗೂ ವೃದ್ಧರು ತೊಂದರೆಗೊಳಗಾಗುತ್ತಾರೆ. ಅವರಿಗೆ ವಿಶೇಷ ಕಾಳಜಿಯ ಅಗತ್ಯ ಇದೆ’’ ಎಂದು ಅವರು ತಿಳಿಸಿದರು.

‘‘ನಮ್ಮ ಎಲ್ಲ ನೋವು ಹಾಗೂ ದುಃಖವನ್ನು ಬದಿಗಿರಿಸಿ ಜವಾಬ್ದಾರಿಗೆ ಹೆಗಲು ಕೊಡಲಿದ್ದೇವೆ. ಝಾನ್ಸಿ ರಾಣಿ ಜನಿಸಿದ ಮಹಾರಾಷ್ಟ್ರದ ನೆಲದಿಂದ ನಾವು ಬಂದಿದ್ದೇವೆ ಎಂದು ನಿಮಗೆ ಮರು ನೆನಪಿಸಲು ಬಯಸುತ್ತೇನೆ. ಈ ಚಳವಳಿಯಲ್ಲಿ ಪಂಜಾಬ್‌ನೊಂದಿಗೆ ನಿಲ್ಲುತ್ತದೆ ಎಂದು ಮಹಾರಾಷ್ಟ್ರ ಭರವಸೆ ನೀಡುತ್ತದೆ’’ ಎಂದು ಪವಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News