ಸೇನಾ ಕ್ಯಾಪ್ಟನ್, ಇತರ ಇಬ್ಬರಿಂದ ಪುರಾವೆ ನಾಶಕ್ಕೆ ಯತ್ನ: ಜಮ್ಮುಕಾಶ್ಮೀರ ಪೊಲೀಸರ ದೋಷಾರೋಪ ಪಟ್ಟಿ ಪ್ರತಿಪಾದನೆ

Update: 2021-01-24 18:16 GMT

ಹೊಸದಿಲ್ಲಿ, ಜ. 24: ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ನಡೆದ ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಸೇನಾ ಕ್ಯಾಪ್ಟನ್ ಹಾಗೂ ಇತರ ಇಬ್ಬರು ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಪ್ರತಿಪಾದಿಸಿದ್ದಾರೆ.

ಎನ್‌ಕೌಂಟರ್ ನಡೆದ ಸಂದರ್ಭ ಸ್ವಾಧೀನಪಡಿಸಿಕೊಂಡ ಶಸ್ತ್ರಾಸ್ತ್ರಗಳ ಬಗ್ಗೆ ಕ್ಯಾಪ್ಟನ್ ಭೂಪಿಂದರ್ ಸಿಂಗ್ ಆಲಿಯಾಸ್ ಮೇಜರ್ ಬಷೀರ್ ಖಾನ್ ತನ್ನ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರ ಪೊಲೀಸ್‌ನ ವಿಶೇಷ ತನಿಖಾ ತಂಡ (ಎಸ್‌ಐಟಿ) ಶೋಪಿಯಾನದ ಮುಖ್ಯ ನ್ಯಾಯಾಂಗ ದಂಡಾಧಿಕಾರಿಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

 ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಯುವಕರ ಸಮೀಪ ಇರಿಸಲಾದ ಶಸ್ತ್ರಾಸ್ತ್ರಗಳ ಮೂಲದ ಕುರಿತು ಸೇನಾ ಕ್ಯಾಪ್ಟನ್ ಹಾಗೂ ಇತರ ಇಬ್ಬರು ಆರೋಪಿಗಳು ಯಾವುದೇ ಮಾಹಿತಿ ನೀಡಿಲ್ಲ ಎಂದು ದೋಷಾರೋಪ ಪಟ್ಟಿ ತಿಳಿಸಿದೆ.

 ಹತ ಯುವಕರ ಮೃತದೇಹದ ಬಳಿ ಇರಿಸಲು ಆರೋಪಿಗಳು ಕಾನೂನು ಬಾಹಿರವಾಗಿ ವ್ಯವಸ್ಥೆ ಮಾಡಿದ ಅಕ್ರಮ ಶಸ್ತ್ರಾಸ್ತ್ರಗಳ ಮೂಲದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ದೋಷಾರೋಪ ಪಟ್ಟಿ ಹೇಳಿದೆ.

ಎನ್‌ಕೌಂಟರ್ ನಡೆಸುವ ಸಂದರ್ಭ ಮೂವರು ಆರೋಪಿಗಳು ಉದ್ದೇಶಪೂರ್ವಕವಾಗಿ ಪುರಾವೆಗಳನ್ನು ನಾಶ ಮಾಡಿದ್ದಾರೆ. ಅಲ್ಲದೆ 20 ಲಕ್ಷ ರೂಪಾಯಿ ಬಹುಮಾನ ಪಡೆಯುವ ಕ್ರಿಮಿನಲ್ ಸಂಚಿನ ಭಾಗವಾಗಿ ತಪ್ಪು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ನೀಡಿದ್ದಾರೆ ಎಂದು ಆರೋಪ ಪಟ್ಟಿ ಹೇಳಿದೆ.

ಆದರೆ 20 ಲಕ್ಷ ರೂಪಾಯಿ ಬಹುಮಾನ ಪಡೆಯಲು ಕ್ಯಾಪ್ಟನ್ ಈ ಎನ್‌ಕೌಂಟರ್ ನಡೆಸಿದ್ದಾರೆ ಎಂಬುದನ್ನು ನಿರಾಕರಿಸಿರುವ ಸೇನೆ, ಹೋರಾಟ ಅಥವಾ ಕರ್ತವ್ಯದ ಸಂದರ್ಭದ ಯಾವುದೇ ಕಾರ್ಯಾಚರಣೆಗೆ ತನ್ನ ಸಿಬ್ಬಂದಿಗೆ ನಗದು ಬಹುಮಾನ ನೀಡುವ ನಿಯಮ ಇಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News