ಎಸ್‌ಪಿಬಿ, ಶಿಂಜೊ ಅಬೆ, ರಾಮ್ ವಿಲಾಸ್ ಪಾಸ್ವಾನ್, ಶಿಯಾ ನಾಯಕ ಕಲ್ಬೆ ಸಾದಿಕ್ ಮುಡಿಗೇರಿದ ಪದ್ಮಪ್ರಶಸ್ತಿಗಳು

Update: 2021-01-25 18:00 GMT

ಹೊಸದಿಲ್ಲಿ,ಜ.25: ಗಣತಂತ್ರ ದಿನದ ಮುನ್ನಾದಿನವಾದ ಸೋಮವಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ದಿವಂಗತ ಮೇರು ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಮಾಜಿ ಜಪಾನ್ ಪ್ರಧಾನಿ ಶಿಂಜೊ ಅಬೆ, ಧಾರ್ಮಿಕ ಮುಖಂಡ ವಹೀದುದ್ದೀನ್ ಖಾನ್, ಬಿ.ಬಿ.ಲಾಲ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಗಳು ಒಲಿದಿದ್ದರೆ, ಮಾಜಿ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯಿ ಮತ್ತು ಶಿಯಾ ವಿದ್ವಾಂಸ ವೌಲಾನಾ ಕಲ್ಬೆ ಸಾದಿಕ್ ಅವರು ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿದ್ದಾರೆ.

ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮತ್ತು ಮಾಜಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರೂ ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕ್ರೀಡೆ, ವೈದ್ಯಕೀಯ, ಕಲೆ, ಸಾಹಿತ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗಾಗಿ 119 ಗಣ್ಯರಿಗೆ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಹೀಗೆ ಮೂರು ವರ್ಗಗಳಲ್ಲಿ ಪ್ರದಾನಿಸಲಾಗುತ್ತದೆ. ಭಾರತ ರತ್ನದ ಬಳಿಕ ಇವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. ಪ್ರತಿ ವರ್ಷ ಜ.25ರಂದು ಪ್ರಶಸ್ತಿ ವಿಜೇತರನ್ನು ಪ್ರಕಟಿಸುವ ಮುನ್ನ ಪದ್ಮ ಪ್ರಶಸ್ತಿಗಳ ಆಯ್ಕೆ ಸಮಿತಿಯ ಶಿಫಾರಸನ್ನು ಪ್ರಧಾನಿ ಮತ್ತು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುತ್ತದೆ. ಕಳೆದ ವರ್ಷ 141 ಪದ್ಮ ಪ್ರಶಸ್ತಿಗಳನ್ನು ಪ್ರದಾನಿಸಲಾಗಿತ್ತು. ಸಾಮಾನ್ಯವಾಗಿ ಪ್ರತಿ ವರ್ಷ ಮಾರ್ಚ್/ಎಪ್ರಿಲ್‌ನ ಆಸುಪಾಸು ರಾಷ್ಟ್ರಪತಿ ಭವನದಲ್ಲಿ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನಿಸುತ್ತಾರೆ.

ಈ ವರ್ಷ ಪ್ರಕಟಿಸಲಾಗಿರುವ 119 ಪ್ರಶಸ್ತಿಗಳ ಪೈಕಿ ಒಂದನ್ನು ಇಬ್ಬರು ಹಂಚಿಕೊಂಡಿದ್ದಾರೆ. ಏಳು ಜನರು ಪದ್ಮವಿಭೂಷಣ,10 ಜನರು ಪದ್ಮಭೂಷಣ ಮತ್ತು 102 ಜನರು ಪದ್ಮಶ್ರೀ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ವಿಜೇತರಲ್ಲಿ 29 ಮಹಿಳೆಯರಿದ್ದು, ವಿದೇಶಿಯರು/ಎನ್ನಾರೈ/ಪಿಐಒ/ಒಸಿಐ ವರ್ಗದಿಂದ 10 ಜನರು ಸೇರಿದ್ದಾರೆ. 16 ಪ್ರಶಸ್ತಿಗಳನ್ನ ಮರಣೋತ್ತರವಾಗಿ ಘೋಷಿಸಲಾಗಿದ್ದು, ಓರ್ವ ತೃತೀಯ ಲಿಂಗಿಯೂ ಪದ್ಮ ಗೌರವಕ್ಕೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News