ರೈತರ ಪ್ರತಿಭಟನೆಯ ಬಳಿಕ ಉನ್ನತ ಮಟ್ಟದ ಸಭೆ ನಡೆಸಿದ ಅಮಿತ್ ಶಾ
Update: 2021-01-26 17:33 IST
ಹೊಸದಿಲ್ಲಿ: ಕೆಂಪುಕೋಟೆಗೂ ಲಗ್ಗೆ ಇಟ್ಟಿರುವ ರೈತರ ಪ್ರತಿಭಟನೆಯ ಬಳಿಕ ಭದ್ರತೆಯನ್ನು ಪರಾಮರ್ಶಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಉನ್ನತ ಭದ್ರತಾ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಉನ್ನತ ಮಟ್ಟದ ಸಭೆಯಲ್ಲಿ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಹಾಗೂ ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್. ಶ್ರೀವಾಸ್ತವ ಹಾಜರಿದ್ದರು.
ಸಾವಿರಾರು ರೈತರು ದಿಲ್ಲಿ ಗಡಿಭಾಗಗಳಲ್ಲಿ ಬ್ಯಾರಿಕೇಡ್ ಗಳನ್ನು ತುಂಡರಿಸಿ ಒಳನುಗ್ಗಿದ ಬಳಿಕ ಉಂಟಾಗಿರುವ ರೈತರು-ಪೊಲೀಸರ ನಡುವಿನ ಘರ್ಷಣೆಯ ಬಗ್ಗೆ ಅಮಿತ್ ಶಾ ಚರ್ಚಿಸಿದರು. ಅರೆ ಸೇನಾ ಪಡೆಯ ನಿಯೋಜನೆಯ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ದಿಲ್ಲಿ ಹಾಗೂ ಅದರ ನೆರೆಹೊರೆಯಲ್ಲಿ ಇಂಟರ್ ನೆಟ್ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ.