ಕೇಂದ್ರ ಸರಕಾರ ಅವಕಾಶ ನೀಡಿದ್ದರಿಂದ ದಿಲ್ಲಿಯ ಪರಿಸ್ಥಿತಿ ಹದಗೆಟ್ಟಿತು: ಆಮ್‌ ಆದ್ಮಿ ಪಕ್ಷ ಆಕ್ರೋಶ

Update: 2021-01-26 14:46 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ನಡೆದಿರುವ ಹಿಂಸಾತ್ಮಕ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷ(ಆಪ್)ಪರಿಸ್ಥಿತಿ ಹದಗೆಡಲು ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟಿರುವುದು ವಿಷಾದನೀಯ ಎಂದು ಹೇಳಿದೆ.

ಕೇಂದ್ರ ಸರಕಾರದ ಕೃಷಿ ಕಾಯ್ದೆಗಳ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಮಂಗಳವಾರ ನಗರದೊಳಗೆ ಪ್ರವೇಶಿಸಿದ್ದು, ಈ ವೇಳೆ ರೈತರು-ಪೊಲೀಸರ ಮಧ್ಯೆ ನಡೆದಿರುವ ಸಂಘರ್ಷದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಶಾಂತಿಯುತ ಪ್ರತಿಭಟನೆಗೆ ಈ ತನಕ ಬೆಂಬಲಿಸುತ್ತಾ ಬಂದಿರುವ ಆಪ್, ಇಂದಿನ ಹಿಂಸಾಚಾರ ಭುಗಿಲೇಳಲು ಸಮಾಜ ವಿರೋಧಿ ಶಕ್ತಿಗಳು ಕಾರಣ ಎಂದು ಆರೋಪಿಸಿದೆ. ದಿಲ್ಲಿ ಪೊಲೀಸರು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಪರಿಸ್ಥಿತಿ ಹದಗೆಡಲು ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಬಿಜೆಪಿಯ ವಿರುದ್ಧ ಮುಗಿಬಿದ್ದಿದೆ.

“ಇಂದಿನ ಪ್ರತಿಭಟನೆಯಲ್ಲಿ ಕಂಡುಬಂದಿರುವ ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪರಿಸ್ಥಿತಿ ಅಷ್ಟರಮಟ್ಟಿಗೆ ಹದಗೆಡಲು ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟಿರುವುದು ವಿಷಾದನೀಯ. ಕಳೆದ 2 ತಿಂಗಳುಗಳಿಂದ ರೈತರ ಪ್ರತಿಭಟನೆ ಶಾಂತಿಯುತವಾಗಿತ್ತು'' ಎಂದು ಆಪ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಂದು ಹಿಂಸಾಚಾರದಲ್ಲಿ ತೊಡಗಿದ್ದವರು ಚಳವಳಿಯ ಭಾಗವಾಗಿದ್ದವರಲ್ಲ ಹಾಗೂ ಅವರೆಲ್ಲ ಸಮಾಜ ವಿರೋಧಿ ಶಕ್ತಿಗಳು ಎಂದು ರೈತ ಮುಖಂಡರೇ ಹೇಳಿದ್ದಾರೆ. ಅವರು ಯಾರೇ ಆಗಿರಲಿ, ಇಂದಿನ ಹಿಂಸಾಚಾರವು ಶಾಂತಿಯುತವಾಗಿ ಹಾಗೂ ಶಿಸ್ತುಬದ್ದವಾಗಿ ನಡೆಯುತ್ತಿದ್ದ ಚಳುವಳಿಯನ್ನು ಖಂಡಿತವಾಗಿಯೂ ದುರ್ಬಲಗೊಳಿಸಿದೆ ಎಂದು ಪಕ್ಷ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News