ಆಂಧ್ರ ಪ್ರದೇಶ: ಮಕ್ಕಳ ಮೃತದೇಹಗಳ ಸುತ್ತ ನರ್ತಿಸುತ್ತಾ, ಹಾಡುತ್ತಿದ್ದ ಆರೋಪಿ ತಾಯಿ

Update: 2021-01-27 07:40 GMT

ತಿರುಪತಿ: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ಮೂಢನಂಬಿಕೆಗಳಿಗೆ ಬಲಿ ಬಿದ್ದು ಹಾಗೂ ಮಂತ್ರವಾದಿಗಳ ಮಾತುಗಳನ್ನು ನಂಬಿ ತಮ್ಮ ಇಬ್ಬರು ಪುತ್ರಿಯರನ್ನು ಹೆತ್ತವರೇ ಹೊಡೆದು ಸಾಯಿಸಿದ ಬರ್ಬರ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಜತೆಗೆ ಇನ್ನೊಂದು ಕುತೂಹಲಕಾರಿ ವಿಚಾರವೂ ಈಗ ಬಹಿರಂಗಗೊಂಡಿದೆ.

ಪೊಲೀಸರು ಆ ಮನೆಗೆ ಪ್ರವೇಶಿಸಿದಾಗ ಪುತ್ರಿಯರ ಮೃತದೇಹದ ಸುತ್ತ ಅವರ ತಾಯಿ ಹಾಡುತ್ತಾ, ನರ್ತಿಸುತ್ತಾ ಇರುವ ದೃಶ್ಯ ಕಂಡು ಆಶ್ಚರ್ಯ ಚಕಿತರಾಗಿದ್ದರು. "ಕೊರೋನವೈರಸ್ ಚೀನಾದಲ್ಲಿ ಮೊದಲು ಕಾಣಿಸಿದ್ದಲ್ಲ, ಬದಲು ಕಲಿಯುಗದ ಕೆಟ್ಟ ಶಕ್ತಿಗಳನ್ನು ಹೋಗಲಾಡಿಸಲು ದೇವರೇ ಅದನ್ನು ಸೃಷ್ಟಿಸಿದ್ದು,'' ಎಂದು ಆಕೆ ಬೊಬ್ಬೆ ಹೊಡೆಯುತ್ತಿರುವುದನ್ನು ಕೇಳಿ ಪೊಲೀಸರೇ ದಂಗಾಗಿದ್ದರು.

ಪೊಲೀಸರು ಆರೋಪಿ ಮಹಿಳೆ ಪದ್ಮಜಾರನ್ನು ಕೋವಿಡ್ ಪರೀಕ್ಷೆಗೆಂದು ಕರೆದುಕೊಂಡು ಹೋದಾಗ ಆಕೆ ನಿರಾಕರಿಸಿ ತಾನೇ ಸ್ವತಃ ಮಾನವ ರೂಪದಲ್ಲಿರುವ ಕೊರೋನವೈರಸ್ ಹಾಗೂ ಪರೀಕ್ಷೆಯ ಅಗತ್ಯವಿಲ್ಲ ಎಂದು ಬೊಬ್ಬಿಟ್ಟಿದ್ದಾರೆ ಎನ್ನಲಾಗಿದೆ.

ಆರೋಪಿಗಳಾದ ವಿ ಪುರುಷೋತ್ತಮ ನಾಯ್ಡು ಹಾಗೂ ಪದ್ಮಜಾ ಇಬ್ಬರೂ ಒಂದು ರೀತಿಯ ಉನ್ಮತ್ತತೆಯಲ್ಲಿದ್ದರು ಎಂದೂ ಪೊಲೀಸರು ತಿಳಿಸಿದ್ದು, ನಾಯ್ಡು ಮನಸ್ಥಿತಿ ಈಗ ಸರಿಯಿದ್ದರೂ ಪದ್ಮಜಾ ಇನ್ನೂ ವಿಚಿತ್ರವಾಗಿ ವರ್ತಿಸುತ್ತಿರುವುದಾಗಿಯೂ ತಿಳಿಸಿದ್ದಾರೆ.

ದಂಪತಿಯ ಹೀನ ಕೃತ್ಯಕ್ಕೆ ಅವರ ಪುತ್ರಿಯರಾದ ಅಲೇಖ್ಯ (27) ಹಾಗೂ ಸಾಯಿ ದಿವ್ಯಾ (22) ಬಲಿಯಾಗಿದ್ದು ಇಬ್ಬರೂ ಬದುಕಿ ಬರುತ್ತಾರೆಂದು ನಂಬಿ ಅವರನ್ನು ಹತ್ಯೆಗೈಯ್ಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ವೈದ್ಯಕೀಯ ತಪಾಸಣೆ ವೇಳೆ ಕೂಡ ಆರೋಪಿ ಪದ್ಮಜಾ ತಾನು ಶಿವನ ರೂಪವೆಂದು ಹೇಳಿಕೊಂಡಿದ್ದರು. ಇಬ್ಬರನ್ನು ಬಂಧಿಸಿ ನ್ಯಾಯಾಲಯದೆದುರು ಹಾಜರು ಪಡಿಸಿದ ನಂತರ ತಿರುಪತಿಯ ಎಸ್‍ವಿಆರ್‍ಆರ್  ಸರಕಾರಿ ಆಸ್ಪತ್ರೆಯ ಮಾನಸಿಕ  ರೋಗಿಗಳ ವಿಭಾಗಕ್ಕೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News