ಜೀಪ್ ಗೆ ಢಿಕ್ಕಿಯಾದ ಟ್ರಕ್, ಕನಿಷ್ಠ 8 ಮಂದಿ ಮೃತ್ಯು

Update: 2021-01-27 09:27 GMT

ಜೈಪುರ: ರಾಜಸ್ಥಾನದ ಟೋಂಕ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ಜೀಪ್ ಗೆ ಟ್ರಕ್ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, ಇತರ 4 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಬೆಳಗ್ಗಿನ ಜಾವ 2:15ಕ್ಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಪ್ರಯಾಣಿಕರಿಂದ ತುಂಬಿದ್ದ ಜೀಪ್ ಗೆ ಟ್ರಕ್ ಹಿಂದಿನಿಂದ ಢಿಕ್ಕಿಯಾಗಿದೆ. 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಘಟನೆಯಲ್ಲಿ ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಟೋಂಕ್ ಸದರ್ ಪೊಲೀಸ್ ಠಾಣೆಯ ಎಸ್ ಎಚ್ ಒ ದಶರಥ್ ಸಿಂಗ್ ಹೇಳಿದ್ದಾರೆ.

ಗಾಯಾಳುಗಳನ್ನು ಜೈಪುರಕ್ಕೆ ಸಾಗಿಸಲಾಗಿದೆ. ಎರಡೂ ವಾಹನಗಳ ಚಾಲಕರು ಪರಾರಿಯಾಗಿದ್ದಾರೆ ಎಂದು ಟೋಂಕ್ ಡಿಜಿಪಿ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಟೋಂಕ್ ನಲ್ಲಿ ರಸ್ತೆ ಅಪಘಾತದಲ್ಲಿ 8 ಮಂದಿ ಮೃತಪಟ್ಟಿರುವ ಸುದ್ದಿ ಕೇಳಿ ಬೇಸರವಾಯಿತು. ಎಲ್ಲರೂ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದರು. ಸಂತ್ರಸ್ತ ಕುಟುಂಬಸ್ಥರಿಗೆ ಸಂತಾಪ ವ್ಯಕ್ತಪಡಿಸುವೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಗೆಹ್ಲೋಟ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News