ಗಣರಾಜ್ಯೋತ್ಸವದ ಸಂದರ್ಭ ಹಿಂಸಾಚಾರ: ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಮನವಿ

Update: 2021-01-27 18:50 GMT

ಗುರುಗಾಂವ್, ಜ. 27: ಗಣರಾಜ್ಯೋತ್ಸವದ ದಿನ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿಯ ಸಂದರ್ಭ ಗುಂಪೊಂದರ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗದೆ.

ಹಿಂಸಾಚಾರಕ್ಕೆ ಹಾಗೂ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಲು ಕಾರಣವಾದ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಸಂಬಂಧಿತ ದಂಡನಾ ನಿಯಮಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಮನವಿ ಕೋರಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯಲ್ಲಿ ವಕೀಲ ವಿಶಾಲ್ ತಿವಾರಿ, ಈ ಪ್ರಕರಣದ ಕುರಿತು ಸಾಕ್ಷ್ಯಗಳನ್ನು ಸಂಗ್ರಹಿಸಲು ಹಾಗೂ ದಾಖಲು ಮಾಡಿಕೊಳ್ಳಲು ಉಚ್ಚ ನ್ಯಾಯಾಲಯದ ಇಬ್ಬರು ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಹಾಗೂ ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ತನಿಖಾ ಆಯೋಗವನ್ನು ರೂಪಿಸುವಂತೆ ಹಾಗೂ ಸಮಯ ಮಿತಿ ಒಳಗಡೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

ಕೆಲವು ಕುಖ್ಯಾತ ಶಕ್ತಿ ಅಥವಾ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು, ಹಾನಿ ಉಂಟಾಗಲು ಹಾಗೂ ಪೊಲೀಸರು-ರೈತ ಪ್ರತಿಭಟನಾಕಾರರ ನಡುವೆ ಘರ್ಷಣೆ ಸಂಭವಿಸಲು ಪಿತೂರಿ ನಡೆಸಿರಬಹುದು ಎಂದು ಮನವಿ ಹೇಳಿದೆ.

   ಈ ವಿಷಯ ತುಂಬಾ ಗಂಭೀರವಾದದು. ಕಳೆದ ಎರಡು ತಿಂಗಳಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಇದ್ದಕ್ಕಿದ್ದಂತೆ ಜನವರಿ 26ರಂದು ಹಿಂಸಾಚಾರಕ್ಕೆ ತಿರುಗಿರುವುದು ಹೇಗೆ?. ಈಗ ರಾಷ್ಟ್ರೀಯ ಭದ್ರತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆ ಉದ್ಭವಿಸಿದೆ. ಈ ಕೋಲಾಹಲ ಸೃಷ್ಟಿಸಿರುವುದಕ್ಕೆ ಜವಾಬ್ದಾರಿ ಯಾರು? ರೈತರ ಶಾಂತಿಯುತ ಪ್ರತಿಭಟನೆಯನ್ನು ಹಿಂಸಾಚಾರಕ್ಕೆ ತಿರುಗಿಸಿದವರು ಯಾರು? ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು ಕಾರಣವಾದ ಸನ್ನಿವೇಶವನ್ನು ಸೃಷ್ಟಿಸಿದವರು ಯಾರು? ಎಂದು ಮನವಿ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News