ದೀಪ್ ಸಿಧು ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಜೊತೆ ಸೇರಿ ಕೇಂದ್ರದಿಂದ ಸಂಚು : ಸಂಯುಕ್ತ ಕಿಸಾನ್ ಮೋರ್ಚಾ ಆರೋಪ

Update: 2021-01-27 18:54 GMT
ಫೈಲ್ ಫೋಟೊ

ಹೊಸದಿಲ್ಲಿ : ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ಕಳೆದೆರಡು ತಿಂಗಳುಗಳಿಂದಲೂ ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ನಿರಂತರವಾಗಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಗಣತಂತ್ರ ದಿನದಂದು ದಿಲ್ಲಿಯಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಸೇರಿಕೊಂಡು ಹಿಂಸಾಚಾರಕ್ಕೆ ಕಾರಣವಾಗಿದ್ದವು ಎಂದು ರೈತ ಸಂಘಟನೆಗಳು ಆರೋಪಿಸಿವೆ. 

ಶಾಂತಿಯುತ ಆಂದೋಲನವು ಹಿಂಸೆಗೆ ತಿರುಗಲು ಕೇಂದ್ರವೇ ಕಾರಣ ಎಂದು ಬೆಟ್ಟು ಮಾಡಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಬುಧವಾರ ಮಾಧ್ಯಮ ಹೇಳಿಕೆಯೊಂದನ್ನು ಹೊರಡಿಸಿದ್ದು, ಅದರ ಪೂರ್ಣಪಾಠ ಇಲ್ಲಿದೆ.

ಕಳೆದ ಏಳು ತಿಂಗಳುಗಳಿಂದಲೂ ಶಾಂತಿಯುತವಾಗಿ ನಡೆಯುತ್ತಿದ್ದ ರೈತರ ಆಂದೋಲನಕ್ಕೆ ಕಳಂಕ ಹಚ್ಚುವ ಒಳಸಂಚೊಂದು ಈಗ ಸಾರ್ವಜನಿಕರೆದುರು ಬಹಿರಂಗಗೊಂಡಿದೆ. ಸರಕಾರವು ದೀಪ್ ಸಿಧು ಮತ್ತು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯಂತಹ ಕೆಲವು ವ್ಯಕ್ತಿಗಳು ಮತ್ತು ಸಂಘಟನೆಗಳೊಂದಿಗೆ ಸೇರಿಕೊಂಡು ಈ ಆಂದೋಲನವನ್ನು ಹಿಂಸಾತ್ಮಕವಾಗಿಸಿದೆ. ಮಂಗಳವಾರ ಕೆಂಪುಕೋಟೆ ಮತ್ತು ದಿಲ್ಲಿಯ ಇತರ ಭಾಗಗಳಲ್ಲಿ ನಡೆದ ಹಿಂಸಾಚಾರದ ಘಟನೆಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ನಾವು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದ್ದೇವೆ.

ಸಾರ್ವಜನಿಕರು ಸಾಕ್ಷಿಯಾಗಿರುವ ಘಟನೆಗಳೆಲ್ಲ ಪೂರ್ವಯೋಜಿತವಾಗಿದ್ದವು. ರೈತರ ಟ್ರ್ಯಾಕ್ಟರ್ ಪರೇಡ್ ಶಾಂತಿಯುತವಾಗಿತ್ತು ಮತ್ತು ನಾವು ಒಪ್ಪಿಕೊಂಡಿದ್ದ ಮಾರ್ಗದಲ್ಲಿಯೇ ಸಾಗುತ್ತಿತ್ತು. ರಾಷ್ಟ್ರೀಯ ಲಾಂಛನಗಳಿಗೆ ಆಗಿರುವ ಅವಮಾನವನ್ನು ನಾವು ಬಲವಾಗಿ ಖಂಡಿಸುತ್ತೇವೆ, ಆದರೆ ನಮ್ಮೊಂದಿಗೆ ಗುರುತಿಸಿಕೊಂಡಿರದಿದ್ದ ಕೆಲವು ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರ ನಡೆಸಿರುವುದರಿಂದ ರೈತರ ಆಂದೋಲನಕ್ಕೆ ‘ಹಿಂಸಾತ್ಮಕ’ ಎಂದು ಹಣೆಪಟ್ಟಿ ಕಟ್ಟುವಂತಿಲ್ಲ. ಎಲ್ಲ ಗಡಿಗಳಲ್ಲಿದ್ದ ರೈತರು ತಮ್ಮ ಪಾಲಿನ ಪರೇಡ್ಗಳನ್ನು ಶಾಂತಿಯುತವಾಗಿ ನಡೆಸಿ ಮಂಗಳವಾರ ಸಂಜೆಯೇ ತಮ್ಮ ಸ್ವಸ್ಥಾನಗಳಿಗೆ ಮರಳಿದ್ದಾರೆ.

ಪ್ರತಿಭಟನಾಕಾರರ ಮೇಲೆ ಪೊಲೀಸರ ಕ್ರೂರ ದೌರ್ಜನ್ಯಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಪೊಲೀಸರು ಮತ್ತು ಇತರ ಏಜೆನ್ಸಿಗಳನ್ನು ಬಳಸಿಕೊಂಡು ಈ ಆಂದೋಲನವನ್ನು ಮಟ್ಟಹಾಕುವ ಸರಕಾರದ ಪ್ರಯತ್ನಗಳು ಬಯಲಾಗಿವೆ. ಮಂಗಳವಾರ ಬಂಧಿಸಲ್ಪಟ್ಟಿರುವ ಶಾಂತಿಯುತ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ನಾವು ಆಗ್ರಹಿಸುತ್ತೇವೆ. ಪರೇಡ್ನಲ್ಲಿ ಪಾಲ್ಗೊಂಡಿದ್ದ ಟ್ರ್ಯಾಕ್ಟರ್ಗಳು ಮತ್ತು ಇತರ ವಾಹನಗಳಿಗೆ ಹಾನಿಯನ್ನುಂಟು ಮಾಡಲು ಪೊಲೀಸರ ಪ್ರಯತ್ನಗಳನ್ನು ಮತ್ತು ಕೆಲವು ವಾಹನಗಳನ್ನು ವಶಪಡಿಸಿಕೊಂಡಿರುವುದನ್ನೂ ನಾವು ಬಲವಾಗಿ ಖಂಡಿಸುತ್ತೇವೆ. ರಾಷ್ಟ್ರೀಯ ಲಾಂಛನಗಳಿಗೆ ಅಗೌರವ ಮತ್ತು ಹಾನಿಯನ್ನುಂಟು ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೂ ನಾವು ಆಗ್ರಹಿಸುತ್ತೇವೆ. ರೈತರು ಅಪ್ರತಿಮ ರಾಷ್ಟ್ರವಾದಿಗಳಾಗಿ ದ್ದಾರೆ ಮತ್ತು ಅವರು ದೇಶದ ಉತ್ತಮ ವರ್ಚಸ್ಸಿನ ರಕ್ಷಕರಾಗಿದ್ದಾರೆ.

ಮಂಗಳವಾರ ನಡೆದ ಕೆಲವು ವಿಷಾದನೀಯ ಘಟನೆಗಳ ನೈತಿಕ ಜವಾಬ್ದಾರಿಯನ್ನು ಹೊತ್ತುಕೊಂಡು ಎಸ್ಕೆಎಂ ಫೆ.1ರಂದು ಹಮ್ಮಿಕೊಳ್ಳಲಾಗಿದ್ದ ಸಂಸತ್ ಜಾಥಾವನ್ನು ಮುಂದೂಡಿರುವುದಾಗಿ ಪ್ರಕಟಿಸುತ್ತಿದೆ. ಮಹಾತ್ಮಾ ಗಾಂಧೀಜಿಯವರು ಹುತಾತ್ಮ ರಾದ ಜ.30ರಂದು ದೇಶಾದ್ಯಂತ ಒಂದು ದಿನದ ನಿರಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದೀಪ್ ಸಿಧುರಂತಹ ಸಮಾಜಘಾತಕ ಶಕ್ತಿಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸುವಂತೆ ಎಸ್ಕೆಎಂ ಸಾರ್ವಜನಿಕರನ್ನು ಕೋರಿದೆ.
ದಿಲ್ಲಿಯಲ್ಲಿ ಮಾತ್ರವಲ್ಲ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ,ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿಯೂ ರೈತರು ಗಣತಂತ್ರ ದಿನ ಪರೇಡ್ಗಳನ್ನು ನಡೆಸಲಾಗಿದೆ. ತಮಿಳುನಾಡು, ಕೇರಳ, ಹೈದರಾಬಾದ್, ಒಡಿಶಾ, ಬಿಹಾರ, ಪ.ಬಂಗಾಳ, ಛತ್ತೀಸ್ಗಡ ಮತ್ತು ಉತ್ತರ ಪ್ರದೇಶಗಳ ರೈತರೂ ದಿಲ್ಲಿ ಪರೇಡ್ನಲ್ಲಿ ಭಾಗವಹಿಸಿದ್ದರು.

ರೈತರ ಆಂದೋಲನದ ಮುಂದಿನ ಯೋಜನೆಗಳು ಮತ್ತು ಚಟುವಟಿಕೆಗಳ ಬಗ್ಗೆ ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು.
ನಮ್ಮ ಆಂದೋಲನವು ಶಾಂತಿಯುತವಾಗಿರುತ್ತದೆ ಎಂದು ಸ್ಪಷ್ಟಪಡಿಸಲು ಬಯಸುತ್ತಿದ್ದೇವೆ. ರೈತರು ಆತ್ಮವಿಶ್ವಾಸವನ್ನು ಹೊಂದಿದ್ದು, ಸರಕಾರಕ್ಕೆ ತಮ್ಮ ಅಸಮಾಧಾನವನ್ನು ಶಾಂತಿಯುತವಾಗಿಯೇ ಪ್ರದರ್ಶಿಸುತ್ತಿದ್ದಾರೆ. ಮಂಗಳವಾರದ ಪರೇಡ್ ಸಂದರ್ಭದಲ್ಲಿ ದಿಲ್ಲಿಯ ಪ್ರಜೆಗಳು ತೋರಿಸಿದ ಪ್ರೀತಿ ನಮ್ಮನ್ನು ಭಾವಪರವಶಗೊಳಿಸಿದೆ.
- ಡಾ.ದರ್ಶನ್ ಪಾಲ್
ಸಂಯುಕ್ತ ಕಿಸಾನ್ ಮೋರ್ಚಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News