ಟಿಎಂಸಿ ಮುಖಂಡನ ಕೊಲೆ : 26 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು, ನಾಲ್ವರು ಸೆರೆ

Update: 2021-01-28 04:24 GMT

ಕೊಲ್ಕತ್ತಾ : ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರನ್ನು ಬಿಜೆಪಿ ಕಾರ್ಯಕರ್ತರು ಥಳಿಸಿ ಕೊಲೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ಮೃತ ಟಿಎಂಸಿ ಮುಖಂಡನನ್ನು ಮಂಗಲ್‌ಕೋಟ್ ಪ್ರದೇಶದ ಸಂಜೀವ್ ಘೋಷ್ ಎಂದು ಗುರುತಿಸಲಾಗಿದೆ. ಘೋಷ್ ಸಾವಿಗೆ ಬಿಜೆಪಿ ಬೆಂಬಲಿಗರು ಕಾರಣ ಎಂದು ಸಂತ್ರಸ್ತ ಕುಟುಂಬದವರು ಮತ್ತು ಟಿಎಂಸಿ ನಾಯಕರು ಆಪಾದಿಸಿದ್ದಾರೆ. ಆದರೆ ಇದನ್ನು ನಿರಾಖರಿಸಿರುವ ಬಿಜೆಪಿ, ಆಡಳಿತಾರೂಢ ಪಕ್ಷದ ಒಳ ಜಗಳ ಈ ಘಟನೆಗೆ ಕಾರಣ ಎಂದು ಹೇಳಿದೆ.

ಮೃತ ಮುಖಂಡನ ತಂದೆ ಸಾಗರ್ ಘೋಷ್ ಈ ಸಂಬಂಧ ಪೊಲೀಸರಿಗೆ ನೀಡಿರುವ ದೂರಿನಲ್ಲಿ 26 ಮಂದಿ ಬಿಜೆಪಿ ಕಾರ್ಯಕರ್ತರನ್ನು ಹೆಸರಿಸಿದ್ದಾರೆ. ಈ ಪೈಕಿ ನಾಲ್ಕು ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರ ಪತ್ತೆ ಕಾರ್ಯ ಮುಂದುವರಿ ದಿದೆ ಎಂದು ಪೊಲೀಸರು ಹೇಳಿದ್ದಾರೆ.

"ಕಾಲುವೆಯೊಂದರ ಬಳಿ ಹೊಂಚುಹಾಕಿ ಬಿಜೆಪಿ ಕಾರ್ಯಕರ್ತರು ನಿರ್ದಯವಾಗಿ ದೊಣ್ಣೆಗಳಿಂದ ಥಳಿಸಿದ್ದಾಗಿ ಮಗ ಸಾಯುವ ಮುನ್ನ ಘಟನೆಯನ್ನು ವಿವರಿದ್ದಾನೆ" ಎಂದು ತಾಯಿ ಆಶಾಲತಾ ಹೇಳಿದ್ದಾರೆ.

ಆದರೆ ಈ ಘಟನೆಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ ಎಂದು ಸ್ಥಳೀಯ ಬಿಜೆಪಿ ಮುಖಂಡ ಕೃಷ್ಣ ಘೋಷ್ ಹೇಳಿ ಕೊಂಡಿದ್ದಾರೆ. ಅಪರಾಧ ಹಿನ್ನೆಲೆ ಹೊಂದಿದ್ದ ಸಂಜೀವ್‌ಗೆ ಪಕ್ಷದಲ್ಲೇ ವಿರೋಧ ಇತ್ತು. ಇದು ಪಕ್ಷದ ಆಂತರಿಕ ಜಗಳದ ಪರಿಣಾಮ ಎಂದು ಅವರು ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News