ರಕ್ಷಣಾ ಸಂಬಂಧ ಬಲಪಡಿಸಲು ಭಾರತ- ಅಮೆರಿಕ ನಿರ್ಧಾರ

Update: 2021-01-28 05:14 GMT

ಹೊಸದಿಲ್ಲಿ : ಅಮೆರಿಕದಲ್ಲಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಭಾರತವನ್ನು ಮೊದಲ ಬಾರಿಗೆ ಬುಧವಾರ ಸಂಪರ್ಕಿಸಿದ್ದು, ಉಭಯ ದೇಶಗಳು ರಕ್ಷಣಾ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಿವೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಅಮೆರಿಕದ ಭದ್ರತಾ ಸಲಹೆಗಾರ ಜ್ಯಾಕ್ ಸುಲಿವಾನ್ ಜತೆ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜನರಲ್ ಲಾಯ್ಡಾ ಆಸ್ಟಿನ್ ಜತೆ ಚರ್ಚೆ ನಡೆಸಿದರು.

ಉಭಯ ದೇಶಗಳ ನಡುವಿನ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಉಭಯ ದೇಶಗಳ ಗಣ್ಯರು ಒಪ್ಪಿಕೊಂಡರು. ಲಾಯ್ಡಿ ಆಸ್ಟಿನ್ ಜತೆ ಬುಧವಾರ ಸಂಜೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ನಮ್ಮ ಪ್ರಮುಖ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಮಸ್ಯೆಗಳನ್ನು ಚರ್ಚಿಸಿದ್ದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪರಸ್ಪರ ಆಯಕಟ್ಟಿನ ಮತ್ತು ಭದ್ರತಾ ಹಿತಾಸಕ್ತಿಯ ಆಧಾರದಲ್ಲಿ ರೂಪಿತವಾಗಿರುವ ಭಾರತ- ಅಮೆರಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸಲು ಉಭಯ ದೇಶಗಳ ಭದ್ರತಾ ಸಲಹೆಗಾರರು ಒಪ್ಪಿಕೊಂಡರು ಎಂದು ವಿದೇಶಾಂಗ ವ್ಯವಹಾರಗ ಸಚಿವಾಲಯದ ಪ್ರಕಟಣೆ ಹೇಳಿದೆ.

ಕೋವಿಡ್-19 ನಂತರದ ಕಾಲಘಟ್ಟದಲ್ಲಿ ಎದುರಾಗಿರುವ ಸವಾಲನ್ನು ಎದುರಿಸಲು ಸಂಘಟಿತವಾಗಿ ಕೆಲಸ ಮಾಡುವ ಅಗತ್ಯತೆಯನ್ನು ಉಭಯ ಗಣ್ಯರು ಒತ್ತಿ ಹೇಳಿದರು. ಜತೆಗೆ ಸಮಗ್ರ ಜಾಗತಿಕ ಆಯಕಟ್ಟಿನ ಪಾಲುದಾರಿಕೆ ವಿಸ್ತರಿಸುವ ಬಗ್ಗೆಯೂ ಮಾತುಕತೆ ನಡೆಯಿತು ಎಂದು ಪ್ರಕಟಣೆ ಹೇಳಿದೆ.

ಅಮೆರಿಕದ ಇತಿಹಾಸದಲ್ಲೇ ರಕ್ಷಣಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಪ್ರಥಮ ಆಫ್ರಿಕನ್ ಮೂಲದ ವ್ಯಕ್ತಿ ಎನಿಸಿಕೊಂಡಿರುವ ಆಸ್ಟಿನ್, ಬ್ರಿಟನ್, ಜಪಾನ್, ದಕ್ಷಿಣ ಕೊರಿಯಾ, ಕೆನಡಾ ಮತ್ತು ಆಸ್ಟ್ರೇಲಿಯಾದ ಮುಖಂಡರ ಜತೆಗೂ ದೂರವಾಣಿ ಸಂಭಾಷಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News