×
Ad

​ಎಂಟು ರಾಜ್ಯಗಳಲ್ಲಿ ವಾರದಿಂದ ಶೂನ್ಯ ಕೋವಿಡ್ ಸಾವು

Update: 2021-01-29 09:14 IST

ಹೊಸದಿಲ್ಲಿ : ಕೋವಿಡ್ ಬಿಗಿಮುಷ್ಟಿಯಿಂದ ದೇಶ ಹೊರಬರುತ್ತಿರುವ ಸ್ಪಷ್ಟ ಸೂಚನೆ ಕಂಡುಬರುತ್ತಿದ್ದು, ಕಳೆದ ಒಂದು ವಾರದಲ್ಲಿ ದೇಶದ ಎಂಟು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವೈರಸ್ ಸೋಂಕಿನಿಂದ ಯಾವ ಸಾವೂ ಸಂಭವಿಸಿಲ್ಲ. ಉಳಿದಂತೆ 18 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀರಾ ಕಡಿಮೆ ಪ್ರಮಾಣದಲ್ಲಿ ಸೋಂಕಿತರು ಮೃತಪಟ್ಟಿದ್ದಾರೆ.

ಇಡೀ ದೇಶದಲ್ಲಿ ಕಳೆದ ಒಂದು ವಾರದಲ್ಲಿ ಸಂಭವಿಸಿದ ಒಟ್ಟು ಕೋವಿಡ್ ಸಾವಿನಲ್ಲಿ ಶೇಕಡ 32ರಷ್ಟು ಅಂದರೆ ಮೂರನೇ ಒಂದರಷ್ಟು ಸಾವು ಮಹಾರಾಷ್ಟ್ರದಲ್ಲಿ ಸಂಭವಿಸಿದೆ. ದೇಶದಲ್ಲಿ ಈ ಅವಧಿಯಲ್ಲಿ ಜೀವ ಕಳೆದುಕೊಂಡವರ ಪೈಕಿ ಏಳು ಜನ ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಪಂಜಾಬ್, ಪಶ್ಚಿಮಬಂಗಾಳ, ದೆಹಲಿ ಮತ್ತು ಉತ್ತರ ಪ್ರದೇಶ ಹೀಗೆ ಆರು ರಾಜ್ಯಗಳಿಗೆ ಸೇರಿದವರು.

ದೇಶದಲ್ಲಿ ಒಂದು ವಾರದ ಸರಾಸರಿ ಸಾವು 140ಕ್ಕೆ ಇಳಿದಿದ್ದು, ಇದು 250 ದಿನಗಳಲ್ಲಿ ಕನಿಷ್ಠ. 2020ರ ಮೇ 22ರಂದು ಕೊನೆಗೊಂಡ ವಾರದಲ್ಲಿ ಇದಕ್ಕಿಂತ ಕಡಿಮೆ ಸಾವು ದಾಖಲಾಗಿತ್ತು. ದೇಶದಲ್ಲಿ ಸೋಂಕು ಉತ್ತುಂಗದಲ್ಲಿದ್ದಾಗ ಅಂದರೆ ಸೆಪ್ಟೆಂಬರ್ 15ರಂದು ಕೊನೆಗೊಂಡ ವಾರದಲ್ಲಿ ಪ್ರತಿದಿನ ಸರಾಸರಿ 1169 ಮಂದಿ ಬಲಿಯಾಗಿದ್ದರು.

ಗುರುವಾರ ಕೋವಿಡ್-19 ಕುರಿತ ಸಚಿವರ ಗುಂಪಿನ 23ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವಧನ್, "ದೇಶದಲ್ಲಿ ಕೋವಿಡ್ ನಕ್ಷೆ ಬಹುತೇಕ ಚಪ್ಪಟೆಯಾಗಿದೆ" ಎಂದು ಹೇಳಿದ್ದಾರೆ.

ದೇಶದ 146 ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಈ ಪೈಕಿ 18 ಜಿಲ್ಲೆಗಳಲ್ಲಿ ಎರಡು ವಾರಗಳಿಂದ, 12 ಜಿಲ್ಲೆಗಳಲ್ಲಿ ಮೂರು ವಾರಗಳಿಂದ ಯಾವುದೇ ಪ್ರಕರಣಗಳಿಲ್ಲ. 21 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಪ್ರಕರಣಗಳಿಲ್ಲ. ದೇಶದ 700 ಜಿಲ್ಲೆಗಳ ಪೈಕಿ ಶೇಕಡ 20ರಷ್ಟು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಸಚಿವರು ಅಂಕಿ ಅಂಶ ನೀಡಿದರು.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1.73 ಲಕ್ಷಕ್ಕೆ ಇಳಿದಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News