ರಾಷ್ಟ್ರಪತಿ ಭಾಷಣಕ್ಕೆ ವಿರೋಧ ಪಕ್ಷಗಳ ಬಹಿಷ್ಕಾರ
ಹೊಸದಿಲ್ಲಿ: ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಶುಕ್ರವಾರ ರಾಷ್ಟ್ರಪತಿಗಳು ಮಾಡುವ ಭಾಷಣವನ್ನು ಬಹಿಷ್ಕರಿಸಲು ಕಾಂಗ್ರೆಸ್ ಸೇರಿದಂತೆ 16 ವಿರೋಧ ಪಕ್ಷಗಳು ನಿರ್ಧರಿಸಿವೆ.
ರೈತರಿಗೆ ಅಪಖ್ಯಾತಿ ತರಲು ಕೇಂದ್ರ ಸರ್ಕಾರ ರಾಜಧಾನಿಯಲ್ಲಿ ಅಪಾಯಕರ ಸನ್ನಿವೇಶವನ್ನು ಸೃಷ್ಟಿಸುತ್ತಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿವೆ.
ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸುವ ಮೂರು ಕೃಷಿ ಕಾನೂನುಗಳನ್ನು ತಕ್ಷಣ ರದ್ದುಪಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಈ ಕಾನೂನುಗಳನ್ನು ಸಮಗ್ರ ಪರಿಶೀಲನೆ ಇಲ್ಲದೇ ಆಂಗೀಕರಿಸಲಾಗಿದ್ದು, ಇದು ದೇಶದ ಆಹಾರ ಭದ್ರತೆಗೆ ಹಾಗೂ ಕೃಷಿಯನ್ನೇ ಅವಲಂಬಿಸಿರುವ ಶೇಕಡ 60ರಷ್ಟು ಮಂದಿಗೆ ಅಪಾಯ ತಂದೊಡ್ಡಿದೆ ಎಂದು ಆಪಾದಿಸಿದೆ. ಎನ್‌ಡಿಎ ಹೊರತುಪಡಿಸಿದ ಪಕ್ಷಗಳ ಪೈಕಿ ಬಿಜೆಡಿ ಮಾತ್ರ ಈ ಬಹಿಷ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಹಿಷ್ಕಾರ ಘೋಷಣೆಗೆ ಕಾಂಗ್ರೆಸ್, ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಡಪಕ್ಷಗಳು, ಎನ್‌ಸಿಪಿ, ಶಿವಸೇನೆ, ಆರ್‌ಜೆಡಿ, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ಸೇರಿದಂತೆ ಬಹುತೇಕ ಎಲ್ಲ ವಿರೋಧ ಪಕ್ಷಗಳು ಸಹಿ ಮಾಡಿದ್ದು, ಪೊಲೀಸ್ ಕ್ರಮವನ್ನು ಎದುರಿಸುತ್ತಿರುವ ರೈತರಿಗೆ ಈ ಎಲ್ಲ ಪ್ರಮುಖ ಪಕ್ಷಗಳು ಬೆಂಬಲ ಸೂಚಿಸಿವೆ.
ಬಿಜೆಪಿಯ ಮಾಜಿ ಮಿತ್ರ ಪಕ್ಷವಾದ ಅಕಾಲಿದಳ ಮತ್ತು ಆಮ್ ಆದ್ಮಿ ಪಾರ್ಟಿ ಪ್ರತ್ಯೇಕವಾಗಿ ಬಹಿಷ್ಕಾರವನ್ನು ಘೋಷಿಸಿವೆ. ಸಾಂಪ್ರದಾಯಿಕವಾಗಿ ಸೆಂಟ್ರಲ್ ಹಾಲ್‌ನಲ್ಲಿ ನಡೆಯುವ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡುವ ಭಾಷಣಕ್ಕೆ ಬಿಜೆಪಿ, ಪ್ರಾದೇಶಿಕ ಪಕ್ಷಗಳಾದ ವೈಎಸ್‌ಆರ್‌ಸಿಪಿ, ಟಿಆರ್‌ಎಸ್, ಬಿಜೆಡಿ, ಎಐಎಡಿಎಂಕೆ ಮತ್ತು ಬಿಎಸ್ಪಿ ಸದಸ್ಯರು ಮಾತ್ರ ಹಾಜರಾಗಲಿದ್ದಾರೆ. ಈ ಪಕ್ಷಗಳು ಯುಪಿಎ ಕೂಟದಿಂದ ದೂರ ಉಳಿದಿದ್ದು, ಅಗತ್ಯ ಬಿದ್ದಾಗ ಸರ್ಕಾರದ ಕೆಲ ಮಸೂದೆಗಳನ್ನು ಬೆಂಬಲಿಸಿದ್ದವು.