×
Ad

"ಗುಂಡೇಟಿನ ಗಾಯ ನೋಡಿದ್ದೇನೆ, ನಾನೇನೂ ಮಾಡುವಂತಿಲ್ಲ" ಎಂದು ಕುಟುಂಬಕ್ಕೆ ಹೇಳಿದ್ದ ಪೋಸ್ಟ್ ಮಾರ್ಟಂ ನಡೆಸಿದ್ದ ವೈದ್ಯ

Update: 2021-01-30 18:20 IST

ಹೊಸದಿಲ್ಲಿ,ಜ.30: ಜನವರಿ 26ರಂದು ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಉರುಳಿ ನವ್ರೀತ್ ಸಿಂಗ್ ಎಂಬ ಯುವಕ ಮೃತಪಟ್ಟಿದ್ದಾಗಿ ದಿಲ್ಲಿ ಪೊಲೀಸರ ಹೇಳಿಕೆಯನ್ನು  ನವ್ರೀತ್  ಕುಟುಂಬ ಒಪ್ಪುತ್ತಿಲ್ಲ ಬದಲು  ಆತ ಗುಂಡೇಟಿನಿಂದಾಗಿಯೇ ಮೃತಪಟ್ಟಿದ್ದಾನೆಂದು ವಾದಿಸುತ್ತಿದೆ. ಘಟನೆ ನಡೆದ ಐಟಿಒ ಸಮೀಪವಿದ್ದ ಹಲವು ರೈತರು ಕೂಡ ಆರಂಭದಲ್ಲಿ ಇಂತಹುದೇ ಮಾತುಗಳನ್ನಾಡಿದ್ದರು ಎಂದು thewire.in ವರದಿ ಮಾಡಿದೆ.

ನವ್ರೀತ್ ಸಿಂಗ್ ಸಾವು ಗುಂಡೇಟಿನಿಂದ ಸಂಭವಿಸಿದೆ ಎಂದು ಮೊದಲು ಟ್ವೀಟ್ ಮಾಡಿದ್ದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಕಾಂಗ್ರೆಸ್ ಸಂಸದ  ಶಶಿ ತರೂರ್ ಸಹಿತ ಹಲವರ ವಿರುದ್ಧ ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನವ್ರೀತ್ ಟ್ರ್ಯಾಕ್ಟರ್ ಉರುಳಿ ಸಾವನ್ನಪ್ಪಿದ್ದಾನೆಂದು ಹೇಳಿ ದಿಲ್ಲಿ ಪೊಲೀಸರು ವೀಡಿಯೋ ಕೂಡ ಬಿಡುಗಡೆ ಮಾಡಿದ್ದರು. ಮರಣೋತ್ತರ ಪರೀಕ್ಷೆಯನ್ನು ಮರುದಿನ ಮುಂಜಾನೆ 2 ಗಂಟೆಗೆ ರಾಮಪುರ್ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ನಡೆಸಿ ನೀಡಿದ್ದ ವರದಿಯಲ್ಲಿ `ತಲೆಗೆ ಉಂಟಾದ ಗಾಯದಿಂದಾಗಿ ಆಘಾತ ಮತ್ತು ರಕ್ತಸ್ರಾವ'ದಿಂದಾಗಿ ಸಾವು ಸಂಭವಿಸಿತ್ತು ಎಂದು ಬರೆಯಲಾಗಿತ್ತು ಎಂದು ವರದಿ ತಿಳಿಸಿದೆ.

ಆದರೆ ಆತನ ಕುಟುಂಬ  ಮಾತ್ರ ಇದನ್ನು ಒಪ್ಪುತ್ತಿಲ್ಲ. "ಗುಂಡೇಟಿನಿಂದಾದ ಗಾಯವನ್ನು ಸ್ಪಷ್ಟವಾಗಿ ನೋಡಿದ್ದಾಗಿ ವೈದ್ಯರು ಹೇಳಿದ್ದರು. ಆದುದರಿಂದ ನಾವು ಅಂತ್ಯಕ್ರಿಯೆ ನೆರವೇರಿಸಿದೆವು. ಆದರೆ   ಮರಣೋತ್ತರ ವರದಿಯಲ್ಲಿ ಗುಂಡೇಟಿನ ಕುರಿತು ವರದಿಯಿಲ್ಲ.  ಗುಂಡೇಟಿನ ಗಾಯ ನೋಡಿದ್ದರೂ ತಾವೇನೂ ಮಾಡುವಂತಿಲ್ಲ, ತಮ್ಮ ಕೈಗಳನ್ನು ಕಟ್ಟಿ ಹಾಕಲಾಗಿದೆ ಎಂದು ವೈದ್ಯರು ಹೇಳಿದ್ದಾರೆ" ಎಂದು ನವ್ರೀತ್  ಅಜ್ಜ ಹರ್ದೀಪ್ ಸಿಂಗ್ ದಿಬ್‍ ದಿಬಾ ಆರೋಪಿಸಿದ್ದಾರೆ.

ಪೋಸ್ಟ್ ಮಾರ್ಟಂ ವರದಿಯಲ್ಲಿ ಎರಡು ʼಲೇಸರೇಟೆಡ್' ಗಾಯಗಳು- ಒಂದು ಗಲ್ಲದಲ್ಲಿ ಹಾಗೂ ಇನ್ನೊಂದು ಕಿವಿಯ ಹಿಂಭಾಗದಲ್ಲಿದ್ದುದು ಉಲ್ಲೇಖವಾಗಿರುವ ಕುರಿತು ಹೇಳಿದ ಅವರು  ಮುಂದೆ ಕೋರ್ಟ್ ಈ ವಿಚಾರ ತೀರ್ಮಾನಿಸಬೇಕಿದೆ ಎಂದರು.

"ಆತನ ಮೃತದೇಹ ನೋಡಿದವರೆಲ್ಲರೂ ಅದು ಗುಂಡೇಟಿನ ಗಾಯವೆಂದು ತಿಳಿದಿದ್ದಾರೆ. ಪೋಸ್ಟ್ ಮಾರ್ಟಂ ನಡೆಸಿದ ವೈದ್ಯರೂ ಹಾಗೆಯೇ ಹೇಳಿದ್ದಾರೆ ಆದರೆ ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ" ಎಂದು ನವ್ರೀತ್ ತಂದೆ ವಿಕ್ರಂಜೀತ್ ಸಿಂಗ್ ಹೇಳಿದ್ದಾರೆ.

ಆದರೆ ಕುಟುಂಬದ ವಾದವನ್ನು ಬರೇಲಿ ಎಡಿಜಿ ಅವಿನಾಶ್ ಚಂದ್ರ ನಿರಾಕರಿಸಿತ್ತಾರೆ. ಸತ್ಯ ಮರೆಮಾಚಲು ಅಥವಾ ತಿರುಚಲು ನಮಗೆ ಯಾವುದೇ ಕಾರಣವಿಲ್ಲ,  ಎಂದು ಅವರು ಹೇಳುತ್ತಾರೆ.

 ಹುಬ್ಬಿನ ಮೇಲೆ, ಗಲ್ಲ, ತಲೆ, ಕಿವಿಯ ಹಿಂಭಾಗ, ಎದೆ ಹಾಗೂ  ತೊಡೆಯಲ್ಲಿ, ಹೀಗೆ ಆರು  ಕಡೆಗಳಲ್ಲಿ ಗಾಯಗಳಿವೆ ಎಂದು ಪೋಸ್ಟ್ ಮಾರ್ಟಂ ವರದಿಯಲ್ಲಿ ಉಲ್ಲೇಖಗೊಂಡಿದೆ.

ಈ ಕುರಿತು ಏಮ್ಸ್‌ ನ ಹಿರಿಯ ವೈದ್ಯರೊಬ್ಬರು ಪ್ರತಿಕ್ರಿಯಿಸಿ "ನವ್ರೀತ್ ಗಲ್ಲ ಹಾಗೂ ಕಿವಿಯ ಹಿಂದುಗಡೆಯಾಗಿರುವ ಲೇಸರೇಟೆಡ್ ಗಾಯ ಗುಂಡಿನ ಗಾಯವೂ ಆಗಿರಬಹುದು. ಗುಂಡು ಒಂದು ಕಡೆಯಿಂದ ಪ್ರವೇಶಿಸಿ ಇನ್ನೊಂದು ಕಡೆಯಿಂದ ಹೊರಬಂದಿರಬಹುದು" ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಎಕ್ಸ್-ರೇ ಕೂಡ ತೆಗೆಯಲಾಗುತ್ತದೆ. ಎಕ್ಸ್-ರೇಯಲ್ಲಿ ಗುಂಡೇಟಿನ ಗಾಯಗಳು ಕಾಣಿಸುತ್ತವೆ ಎಂದು ವೈದ್ಯರು ಹೇಳಿದ್ದರೂ ಅದನ್ನು ತೋರಿಸಿಲ್ಲ ಎಂದು ನವ್ರೀತ್ ತಂದೆ ಹೇಳಿದ್ದಾರೆ.

ಎಕ್ಸ್-ರೇ ತೆಗೆಯಲಾಗಿದೆ ಎಂದು ಪೋಸ್ಟ್ ಮಾರ್ಟಂ ನಡೆಸಲಾದ ರಾಮಪುರ್ ಜಿಲ್ಲಾಸ್ಪತ್ರೆಯ ಉಪಮುಖ್ಯ ವೈದ್ಯಾಧಿಕಾರಿ ಮನೋಜ್ ಶುಕ್ಲಾ ಕೂಡ ದೃಢೀಕರಿಸಿದ್ದಾರೆ ಆದರೆ ಪೋಸ್ಟ್ ಮಾರ್ಟಂ ವರದಿಯಲ್ಲಿ ಎಕ್ಸ್-ರೇ ಉಲ್ಲೇಖವಿಲ್ಲ. ಈ ಕುರಿತು ಸ್ವತಂತ್ರ ತನಿಖೆಯಿಂದ ನಿಜಾಂಶ ಹೊರಬರಬಹುದು ಎಂದು ನವ್ರೀತ್ ಕುಟುಂಬ ಆಶಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News