×
Ad

'ದಿಲ್ಲಿಯ ಕಾನೂನು ವ್ಯವಸ್ಥೆಗಾಗಿ ಕೇಜ್ರಿವಾಲ್‌ ಸರಕಾರವನ್ನು ವಜಾಗೊಳಿಸಿʼ ಎಂದ ಸುಬ್ರಮಣಿಯನ್‌ ಸ್ವಾಮಿ

Update: 2021-01-30 18:51 IST

ಹೊಸದಿಲ್ಲಿ,ಜ.30: ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದಿಲ್ಲಿಯ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರಕಾರವನ್ನು ವಜಾಗೊಳಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯನ್ನು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

"ಈಗ ಒಂದು ವಿಚಾರ ಸ್ಪಷ್ಟವಾಗಿದೆ. ದಿಲ್ಲಿಯ ಶ್ರೀ 420 ನಕ್ಸಲೈಟ್ ಸರಕಾರವನ್ನು ವಜಾಗೊಳಿಸದೇ ಇದ್ದಲ್ಲಿ ಮೋದಿಗೆ  ಸಂವಿಧಾನದ ಪ್ರಕಾರ ದಿಲ್ಲಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ" ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ದಿಲ್ಲಿಯಲ್ಲಿ ನಡೆದ ಘಟನೆಯ ನಂತರ ಸ್ವಾಮಿಯ ಈ ಹೇಳಿಕೆ ಬಂದಿದೆ. ಗಣತಂತ್ರ ದಿನದಂದು ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭ ನಡೆದ ಘಟನೆಯು ದುರಾದೃಷ್ಟಕರವೆಂದು ಹೇಳಿದ್ದ ಕೇಜ್ರಿವಾಲ್ ಅದೇ ಸಮಯ ಇದರಿಂದಾಗಿ ರೈತರ ಆಂದೋಲನ ನಿಲ್ಲುವುದಿಲ್ಲ ಎಂದಿದ್ದರು.

ಈ ಹಿಂದೆ ಕೂಡ ಸ್ವಾಮಿ ದಿಲ್ಲಿ ಸೀಎಂ ಕೇಜ್ರಿವಾಲ್ ಅವರನ್ನು 'ಶ್ರೀ 420' ಎಂದು ಬಣ್ಣಿಸಿದ್ದರು. ಕಳೆದ ಜುಲೈ ತಿಂಗಳಲ್ಲಿ ದಿಲ್ಲಿಯಲ್ಲಿ ಏರಿಕೆಯಾಗುತ್ತಿರುವ ಕೋವಿಡ್ ಪ್ರಕರಣಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ಸ್ವಾಮಿ "ದೇಶದ ಕೊರೋನವೈರಸ್ ಪ್ರಕರಣಗಳಲ್ಲಿ ಗುಜರಾತ್‍ನಲ್ಲಿ ಕೇವಲ ಶೇ 1.6 ಪ್ರಕರಣಗಳಿದ್ದರೆ ದಿಲ್ಲಿಯ  ಪಾಲು ಶೇ 9ರಷ್ಟಿದೆ. ಶ್ರೀ 420 ಪ್ರತಿದಿನ ಟಿವಿಯಲ್ಲಿ ಮಾತ್ರ ಬರುತ್ತಾರೆಯೇ ವಿನಃ ದಿಲ್ಲಿಗಾಗಿ ಏನನ್ನೂ ಮಾಡುವುದಿಲ್ಲ" ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News