ಅಮೆರಿಕದಲ್ಲಿ ಗಾಂಧಿ ಪ್ರತಿಮೆಯ ಧ್ವಂಸಕ್ಕೆ ಭಾರತದ ಖಂಡನೆ
ಹೊಸದಿಲ್ಲಿ,ಜ.30: ಅಮೆರಿಕದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದನ್ನು ಭಾರತವು ಶನಿವಾರ ಬಲವಾಗಿ ಖಂಡಿಸಿದ್ದು,ಇದು ಶಾಂತಿದೂತನ ವಿರುದ್ಧದ ದುರುದ್ದೇಶಪೂರ್ವಕ ಕೃತ್ಯವಾಗಿದೆ ಎಂದು ಹೇಳಿದೆ.
ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್‌ನಲ್ಲಿಯ ಗಾಂಧೀಜಿಯವರ ಪ್ರತಿಮೆಯನ್ನು ದುಷ್ಕರ್ಮಿಗಳು ಉರುಳಿಸಿದ್ದು ಬುಧವಾರ ಬೆಳಿಗ್ಗೆ ಪತ್ತೆಯಾಗಿತ್ತು. ಪ್ರತಿಮೆಯ ಮುಖದ ಅರ್ಧಭಾಗ ನಾಪತ್ತೆಯಾಗಿದ್ದು,ಕಣಕಾಲುಗಳ ಬಳಿ ತುಂಡರಿಸಲಾಗಿತ್ತು.
ಭಾರತವು 2016ರಲ್ಲಿ ಈ ಪ್ರತಿಮೆಯನ್ನು ಡೇವಿಸ್ ನಗರಕ್ಕೆ ಉಡುಗೊರೆಯಾಗಿ ನೀಡಿತ್ತು ಎಂದು ಹೇಳಿಕೆಯೊಂದರಲ್ಲಿ ತಿಳಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು,ಇಡೀ ಜಗತ್ತೇ ಗೌರವಿಸುವ ಶಾಂತಿ ಮತ್ತು ನ್ಯಾಯದ ಪ್ರತೀಕವಾಗಿರುವ ಮಹಾನ್ ನಾಯಕನ ವಿರುದ್ಧದ ಈ ದುರುದ್ದೇಶಪೂರ್ವಕ ಮತ್ತು ತುಚ್ಛ ಕೃತ್ಯವನ್ನು ಭಾರತ ಸರಕಾರವು ಬಲವಾಗಿ ಖಂಡಿಸುತ್ತದೆ ಎಂದು ಹೇಳಿದೆ.
ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಘಟನೆಯ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆಯೊಂದಿಗೆ ಚರ್ಚಿಸಿದೆ ಮತ್ತು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕೂಡ ಡೇವಿಸ್ ನಗರಾಡಳಿತ ಮತ್ತು ತನಿಖೆಯನ್ನು ಆರಂಭಿಸಿರುವ ಕಾನೂನು ಜಾರಿ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಪ್ರತ್ಯೇಕವಾಗಿ ಕೈಗೆತ್ತಿಕೊಂಡಿದ್ದಾರೆ ಎಂದೂ ಸಚಿವಾಲಯವು ತಿಳಿಸಿದೆ.
ಘಟನೆಯ ಬಗ್ಗೆ ತೀವ್ರ ವಿಷಾದವನ್ನು ವ್ಯಕ್ತಪಡಿಸಿರುವ ಡೇವಿಸ್‌ನ ಮೇಯರ್,ಈ ಕುರಿತು ತನಿಖೆಯನ್ನು ಆರಂಭಿಸಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಭಾರತೀಯ ಸಮುದಾಯ ಸಂಘಟನೆಗಳು ಪ್ರತಿಮೆಯನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿವೆ ಎಂದು ಸಚಿವಾಲಯವು ತಿಳಿಸಿದೆ.
ತನ್ಮಧ್ಯೆ,ಪ್ರತಿಮೆ ಧ್ವಂಸ ಘಟನೆಯು ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಅಮೆರಿಕವು,ದುಷ್ಕರ್ಮಿಗಳ ವಿರುದ್ಧ ತ್ವರಿತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಭಾರತೀಯ ಅಮೆರಿಕನ್ ಸಮುದಾಯವು ಕೂಡ ಈ ದುಷ್ಕೃತ್ಯದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದೆ. ಇದನ್ನೊಂದು ದ್ವೇಷಾಪರಾಧ ಕೃತ್ಯವೆಂದು ಪರಿಗಣಿಸಿ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿರುವ ಹಿಂದು ಅಮೆರಿಕನ್ ಫೌಂಡೇಷನ್,ಭಾರತೀಯ ಅಮೆರಿಕನ್ ಸಮುದಾಯವನ್ನು ಹೆದರಿಸುವುದು ದುಷ್ಕರ್ಮಿಗಳ ಉದ್ದೇಶವಾಗಿದೆ ಎಂದು ಹೇಳಿದೆ.