ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ ‘ಒಳಗಿನವರ ಕೈವಾಡ’ವಿರುವ ಶಂಕೆ
ಹೊಸದಿಲ್ಲಿ,ಜ.30: ಇಲ್ಲಿಯ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಶುಕ್ರವಾರ ಸಂಭವಿಸಿದ್ದ ಕಡಿಮೆ ತೀವ್ರತೆಯ ಸ್ಫೋಟದ ಹಿಂದೆ ‘ಒಳಗಿನವರ ಕೈವಾಡ ’ವಿರುವ ಬಗ್ಗೆ ದಿಲ್ಲಿ ಪೊಲೀಸ್‌ನ ವಿಶೇಷ ಘಟಕವು ಶಂಕಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. ಘಟನಾ ಸ್ಥಳದಲ್ಲಿ ಪತ್ರವೊಂದು ಪತ್ತೆಯಾಗಿದ್ದು,ಇದೊಂದು ‘ಟ್ರೇಲರ್’ ಆಗಿದೆ ಎಂದು ಅದರಲ್ಲಿ ಬಣ್ಣಿಸಲಾಗಿದೆ.
ರಾಯಭಾರ ಕಚೇರಿಯಲ್ಲಿ ನಿಯೋಜಿತ ಸಿಬ್ಬಂದಿಗಳು ಮತ್ತು ಭದ್ರತಾ ಸಿಬ್ಬಂದಿಗಳ ಪಟ್ಟಿಯೊಂದನ್ನು ಪೊಲೀಸರು ಸಿದ್ಧಪಡಿಸಿದ್ದು,ಅವರನ್ನು ಪ್ರಶ್ನಿಸುತ್ತಿದ್ದಾರೆ. ಒಳಗಿನವರೇ ಯಾರೋ ಈ ಸ್ಫೋಟದ ಹಿಂದಿರುವಂತಿದೆ ಮತ್ತು ಅದು ಸಾಧ್ಯವೂ ಇದೆ ಎಂದು ತಿಳಿಸಿದ ಪೊಲೀಸ್ ಮೂಲವೊಂದು,ಶುಕ್ರವಾರ ರಜೆಯಲ್ಲಿದ್ದ ವಿಭಾಗವಾರು ಸಿಬ್ಬಂದಿಗಳ ವಿವರಗಳನ್ನು ಸಂಗ್ರಹಿಸಿದ್ದೇವೆ ಮತ್ತು ಕಚೇರಿಯಿಂದ ಬೇಗನೆ ಹೊರಬಿದ್ದಿದ್ದ ಸಿಬ್ಬಂದಿಗಳ ಬಗ್ಗೆ ತಿಳಿದುಕೊಳ್ಳಲು ಹಾಜರಿ ರಿಜಿಸ್ಟರ್‌ಗಳನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿಯ ಸಿಸಿಟಿವಿ ಪೂಟೇಜ್‌ಗಳನ್ನೂ ಪರಿಶೀಲಿಸಲಾಗುತ್ತದೆ ಎಂದು ಹೇಳಿದೆ.
ಸ್ಫೋಟ ಸಂಭವಿಸಿದ್ದ ಸಮಯದ ಆಸುಪಾಸಿನಲ್ಲಿ ತಾನು ಇಬ್ಬರು ಶಂಕಾಸ್ಪದ ವ್ಯಕ್ತಿಗಳನ್ನು ರಾಯಭಾರ ಕಚೇರಿಯ ಬಳಿಗೆ ಇಳಿಸಿದ್ದೆ ಎಂದು ಕ್ಯಾಬ್ ಚಾಲಕನೋರ್ವ ಶುಕ್ರವಾರ ರಾತಿ ವಿಶೇಷ ಘಟಕಕ್ಕೆ ಕರೆ ಮಾಡಿ ತಿಳಿಸಿದ್ದ. ಪೊಲೀಸರ ಬಳಿಯಲ್ಲಿರುವ ಸೆಕ್ಯುರಿಟಿ ಕ್ಯಾಮರಾದ ಫೂಟೇಜ್ ಸ್ಫೋಟ ಸಂಭವಿಸುವುದಕ್ಕೆ ಕೆಲವೇ ಕ್ಷಣಗಳ ಮುನ್ನ ರಾಯಭಾರ ಕಚೇರಿಯ ಬಳಿ ಕ್ಯಾಬ್‌ವೊಂದರ ಇರುವಿಕೆಯನ್ನು ತೋರಿಸಿದೆ. ಆದರೆ ಚಾಲಕ ಮತ್ತು ಇಬ್ಬರು ಪ್ರಯಾಣಿಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಯಾವುದೇ ದೃಢವಾದ ಸಾಕ್ಷ ಲಭಸಿಲ್ಲ,ಹೀಗಾಗಿ ಅದೊಂದು ಹುಸಿಕರೆಯಾಗಿತ್ತು ಎಂದು ಪರಿಗಣಿಸಲಾಗಿದೆ.
ಸ್ಫೋಟದಿಂದಾಗಿ ಯಾರೂ ಗಾಯಗೊಂಡಿಲ್ಲ.
ಇಸ್ರೇಲ್ ರಾಯಭಾರಿ ಕಚೇರಿ ಮತ್ತು ರಾಜತಾಂತ್ರಿಕರಿಗೆ ಪೂರ್ಣ ರಕ್ಷಣೆಯನ್ನು ಒದಗಿಸಲಾಗುವುದು ಮತ್ತು ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು ಟ್ವೀಟಿಸಿದ್ದಾರೆ.
ತಮ್ಮ ಎಲ್ಲ ರಾಜತಾಂತ್ರಿಕರು ಮತ್ತು ಅವರ ಕುಟುಂಬಗಳು ಸುರಕ್ಷಿತವಾಗಿದ್ದಾರೆ ಮತ್ತು ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 29ನೇ ವರ್ಷಾಚರಣೆ ಸಂದರ್ಭದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಇಸ್ರೇಲ್ ರಾಯಭಾರಿ ರಾನ್ ಮಲ್ಕಾ ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಪೊಲೀಸರು ಘಟನಾ ಸ್ಥಳದಿಂದ ಸಹಿಯಿಲ್ಲದ ಪತ್ರವೊಂದನ್ನು ವಶಪಡಿಸಿಕೊಂಡಿದ್ದು,ಅದರ ಅಧಿಕೃತತೆಯನ್ನು ಪರಿಶೀಲಿಸುತ್ತಿದ್ದಾರೆ. ಸ್ಫೋಟವನ್ನು ಕೇವಲ ಟ್ರೇಲರ್ ಎಂದು ಬಣ್ಣಿಸಿರುವ ಪತ್ರವಿದ್ದ ಲಕೋಟೆಯ ಮೇಲೆ ಇಸ್ರೇಲ್ ರಾಯಭಾರಿಯನ್ನು ಉಲ್ಲೇಖಿಸಲಾಗಿದೆ. ಇರಾನಿನ ಜನರಲ್ ಕಾಸಿಂ ಸೊಲೈಮಾನಿ ಮತ್ತು ಪರಮಾಣು ವಿಜ್ಞಾನಿ ಮೊಹ್ಸೀನ್ ಫಕೀರಝಾದೆ ಅವರನ್ನು ‘ಹುತಾತ್ಮರು ’ಎಂದು ಬಣ್ಣಿಸಿದೆ. ಈ ಇಬ್ಬರು ಇರಾನಿಗಳು ಕಳೆದ ವರ್ಷ ಸಂಭವಿಸಿದ್ದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕೊಲ್ಲಲ್ಪಟ್ಟಿದ್ದರು.