ಇಸ್ರೇಲ್-ಫೆಲೆಸ್ತೀನ್ ಶಾಂತಿ ಪ್ರಕ್ರಿಯೆಗೆ ಮತ್ತೆ ಅವಕಾಶ ವಿಶ್ವಸಂಸ್ಥೆ ಮುಖ್ಯಸ್ಥ ವಿಶ್ವಾಸ

Update: 2021-01-30 15:20 GMT

 ವಿಶ್ವಸಂಸ್ಥೆ, ಜ. 30: ವರ್ಷಗಳ ನಿಷ್ಕ್ರಿಯತೆಯ ಬಳಿಕವೂ, ದಶಕಗಳ ಹಳೆಯ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸ ಬಹುದು ಎಂದು ಭಾವಿಸಲು ಕಾರಣಗಳಿವೆ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಎರಡು-ದೇಶ ಪರಿಹಾರದ ಆಧಾರದಲ್ಲಿ ‘ನೈಜ ಶಾಂತಿ ಪ್ರಕ್ರಿಯೆಯೊಂದನ್ನು’ ಆರಂಭಿಸಲು ಯಾವುದೆಲ್ಲ ಉಪಕ್ರಮಗಳನ್ನು ತೆಗೆದುಕೊಳ್ಳಬಹುದು ಎನ್ನುವುದನ್ನು ವಿಶ್ವಸಂಸ್ಥೆಯು ಪರಿಶೀಲಿಸಲಿದೆ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡಿದ ಅವರು ಹೇಳಿದರು.

‘‘ಒಂದು ಹಂತದಲ್ಲಿ ನಮ್ಮನ್ನು ಒಳಗೆ ಕೂಡಿಹಾಕಿದಂಥ ಪರಿಸ್ಥಿತಿಯೊಂದು ನಿರ್ಮಾಣವಾಗಿತ್ತು. ಆ ಸಮಯದಲ್ಲಿ ಯಾವುದೇ ಪ್ರಗತಿ ಗೋಚರಿಸಲಿಲ್ಲ’’ ಎಂದು ಹಿಂದಿನ ಟ್ರಂಪ್ ಆಡಳಿತವನ್ನು ಉಲ್ಲೇಖಿಸುತ್ತಾ ಹೇಳಿದರು. ಆದರೆ, ಅವರು ಟ್ರಂಪ್ ಹೆಸರನ್ನು ಹೇಳಲಿಲ್ಲ.

ಫೆಲೆಸ್ತೀನ್ ಜೊತೆಗಿನ ಸಂಬಂಧವನ್ನು ಮರುಸ್ಥಾಪಿಸುವುದಾಗಿ ಹಾಗೂ ಫೆಲೆಸ್ತೀನ್ ನಿರಾಶ್ರಿತರಿಗೆ ನೀಡುವ ನೆರವನ್ನು ನವೀಕರಿಸುವುದಾಗಿ ನೂತನ ಬೈಡನ್ ಸರಕಾರ ಇತ್ತೀಚೆಗೆ ಮಾಡಿರುವ ಘೊಷಣೆಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮುಖ್ಯಸ್ಥರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬೈಡನ್‌ರ ಸಮತೋಲಿತ ನೀತಿಯಿಂದಾಗಿ, ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ನಾಲ್ವರು ಸಂಧಾನಕಾರರಾದ ಅಮೆರಿಕ, ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ರಶ್ಯ ಮತ್ತೆ ಸಭೆಗಳನ್ನು ನಡೆಸುವ ಸಾಧ್ಯತೆಗಳು ತೆರೆದಿವೆ ಎಂದು ಅವರು ಹೇಳಿದರು.

 ಟ್ರಂಪ್ ಅವಧಿಯಲ್ಲಿ ಈ ಗುಂಪುಗಳ ಸಭೆ ನಡೆಸುವುದನ್ನು ಹಾಗೂ ಆ ಮೂಲಕ ಸಂಧಾನ ಪ್ರಯತ್ನಗಳನ್ನು ತಡೆಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News