ಜನ ಮೆಚ್ಚಿದರೇನೇ ಅವಕಾಶ ಸಿಗುತ್ತದೆ: ನಿಮಿಕಾ ರತ್ನಾಕರ್

Update: 2021-01-30 19:30 GMT

ಕರಾವಳಿಯಿಂದ ಬಂದು ದೇಶದಾದ್ಯಂತ ಹೆಸರು ಮಾಡಿದವರ ಪಟ್ಟಿಯೇ ಇದೆ. ಅಂಥದೊಂದು ಸಾಧನೆಯನ್ನು ವರ್ಷಗಳ ಹಿಂದೆ ಮಾಡಿ ಸುದ್ದಿಯಾದವರು ನಿಮಿಕಾ ರತ್ನಾಕರ್. ಹೌದು ಸೌಂದರ್ಯದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಸುಂದರಿ ಐಶ್ವರ್ಯಾ ರೈಗೆ ಮಂಗಳೂರು ತವರು ಎನ್ನುತ್ತಿರುತ್ತೇವೆ. ಅದೇ ರೀತಿ 2017ರಲ್ಲಿ ‘ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್’ ಆಗಿ ವಿಜೇತರಾದವರು ನಿಮಿಕಾ. ಸೌಂದರ್ಯ ಸ್ಪರ್ಧಾ ವಿಜೇತೆಯರೆಲ್ಲ ಐಶ್ವರ್ಯಾ ರೈಯಂತೆ ಜನಪ್ರಿಯತೆ ಪಡೆಯುವುದಿಲ್ಲ. ಅದನ್ನು ಆಕೆ ನಟಿಯಾಗಿ ಸಾಧಿಸಿದ್ದಾರೆ. ಪ್ರಸ್ತುತ ನಿಮಿಕಾ ರತ್ನಾಕರ್ ಕೂಡ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ತಾರೆಯಾಗುವತ್ತ ಹೆಜ್ಜೆ ಹಾಕಿದ್ದಾರೆ.


ಪ್ರ: ಕರಾವಳಿಯ ಜೊತೆಗಿರುವ ನಿಮ್ಮ ನಂಟಿನ ಬಗ್ಗೆ ಹೇಳಿ
ನಿಮಿಕಾ: ನಾನು ಹುಟ್ಟಿದ್ದೇ ಮಂಗಳೂರಿನಲ್ಲಿ. ನನ್ನ ಕುಟುಂಬ ಈಗಲೂ ಮಂಗಳೂರಿನಲ್ಲೇ ಇದೆ. ನನ್ನ ತಂದೆ ರತ್ನಾಕರ್ ಇಂಟೀರಿಯರ್ ಡಿಸೈನಿಂಗ್ ಬಿಝಿನೆಸ್ ಮಾಡ್ತಾ ಇದ್ದಾರೆ. ಅಮ್ಮ ಹೇಮಲತಾ ಗೃಹಿಣಿ. ನಾವಿಬ್ಬರು ಮಕ್ಕಳು. ತಮ್ಮ ನಿತಿಕ್ ಇಟಲಿಯಲ್ಲಿ ಆರ್ಕಿಟೆಕ್ಟ್ ವೃತ್ತಿಯಲ್ಲಿದ್ದಾನೆ.

ಪ್ರ: ನೀವು ಗಾಂಧಿನಗರಕ್ಕೆ ಕಾಲಿಟ್ಟಿದ್ದು ಹೇಗೆ?
ನಿಮಿಕಾ: ನಿಜ ಹೇಳಬೇಕೆಂದರೆ ನಾನು ಗಾಯಕಿಯಾಗುವ ಕನಸು ಕಂಡವಳು. ತುಳು ಸಿನೆಮಾಗಳಲ್ಲಿ ಹಾಡಿದ್ದೇನೆ ಕೂಡ. ‘ಮದಿಪು’ ಚಿತ್ರದ ಹಾಡು ಅದಕ್ಕೊಂದು ಉದಾಹರಣೆ. ನನಗೆ ಗಾಯಕಿಯಾಗಿ ಮೊದಲ ಅವಕಾಶವನ್ನು ವಿ. ಮನೋಹರ್ ಅವರು ನೀಡಿದರು. ಕನ್ನಡದಲ್ಲಿಯೂ ಟ್ರ್ಯಾಕ್ ಸಿಂಗರ್ ಆಗಿ ಗುರುತಿಸಿಕೊಂಡೆ. ಶಾಲಾ ದಿನಗಳಿಂದಲೇ ನಟನೆಯೊಂದನ್ನು ಬಿಟ್ಟು ಗಾಯನ ಸೇರಿದಂತೆ ಬೇರೆಲ್ಲ ಸಾಂಸ್ಕೃತಿಕ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಪಡೆಯುತ್ತಿದ್ದೆ. ಒಂದಷ್ಟು ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದ ಕಾರಣ ಅದೇ ಕ್ಷೇತ್ರದಲ್ಲೇ ಮುಂದುವರಿಯುವ ಆಸೆ ಇತ್ತು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಕೊನೆಗೆ ನಾನು ನಟಿಯಾಗಿ ಬದಲಾಗಿದ್ದೇನೆ!

ಪ್ರ: ‘ರಾಮಧಾನ್ಯ’ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಯಿಂದ ಜವಾಬ್ದಾರಿ ಹೆಚ್ಚಿದಂತಾಗಿದೆಯೇ?
ನಿಮಿಕಾ: ರಾಮಧಾನ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಅದು ಒಟ್ಟು ಸಿನೆಮಾಕ್ಕೆ ದೊರಕಿರುವಂತಹ ಪ್ರಶಸ್ತಿ. ರಾಜ್ಯ ಪ್ರಶಸ್ತಿ ವಿಜೇತ ಚಿತ್ರದಲ್ಲಿ ನಾನು ಪ್ರಧಾನ ಪಾತ್ರ ವಹಿಸಿದ್ದೇನೆ ಎನ್ನುವ ಖುಷಿ ಖಂಡಿತವಾಗಿ ನನಗೆ ಇದೆ. ಆದರೆ ವೈಯಕ್ತಿಕವಾಗಿ ಪ್ರಶಸ್ತಿಗಿಂತಲೂ ಜನಪ್ರಿಯತೆಯನ್ನೇ ಅಸ್ತಿ ಎಂದುಕೊಳ್ಳುವವಳು ನಾನು. ಈಗಾಗಲೇ ಜನರಿಂದ ಸಿಗುತ್ತಿರುವಂತಹ ಗುರುತಿಸುವಿಕೆ ನನಗೆ ನಟನೆಯ ವಿಚಾರದಲ್ಲಿ ಹೆಚ್ಚಿನ ಉತ್ಸಾಹ ನೀಡಿದೆ. ಜನ ಮೆಚ್ಚಿದರೇನೇ ಖುಷಿ, ಮೆಚ್ಚುಗೆಯಿಂದಲೇ ಹೆಚ್ಚು ಅವಕಾಶ. ಹಾಗಾಗಿಯೇ ಸಿನೆಮಾಗಳ ವಿಚಾರದಲ್ಲಿ ಪ್ರೇಕ್ಷಕರೇ ಪ್ರಭುಗಳು ಎನ್ನುವ ಹಿರಿಯರ ಮಾತನ್ನು ಅಕ್ಷರಶಃ ನಂಬುವವಳು ನಾನು.

ಪ್ರ: ಜನ ಮೆಚ್ಚುವಂತಹ ಪಾತ್ರಗಳು ದೊರಕುತ್ತಿವೆಯೇ?
ನಿಮಿಕಾ: ಖಂಡಿತವಾಗಿ. ಅದೇ ಸದ್ಯದ ಖುಷಿಯ ಬೆಳವಣಿಗೆ. ಎಷ್ಟೇ ಮಹಿಳಾ ಪ್ರಧಾನ ಪಾತ್ರಗಳಿದ್ದರೂ ಸ್ಟಾರ್ ನಾಯಕರಿಗೆ ಅಭಿಮಾನಿಗಳು ನೀಡುವ ಸ್ವಾಗತವೇ ಬೇರೆ. ಅದು ಆ ಸ್ಟಾರ್‌ಗೆ ಮಾತ್ರವಲ್ಲ ಪೂರ್ತಿ ಚಿತ್ರತಂಡಕ್ಕೆ ಸಹಾಯವಾಗುತ್ತದೆ. ಹಾಗಾಗಿ ಜನಪ್ರಿಯ ಸ್ಟಾರ್ ಸಿನೆಮಾಗಳಲ್ಲಿ ನಾಯಕಿಯಾಗುವುದು ಎಂದರೆ ಅದೊಂದು ದೊಡ್ಡ ಅವಕಾಶವೇ ನಿಜ. ಅಂತಹ ಒಂದಷ್ಟು ಅವಕಾಶಗಳು ನನಗೆ ಲಭಿಸಿವೆ. ಉಪೇಂದ್ರ ಅವರ ‘ತ್ರಿಶೂಲಂ’ ಬಹಳ ದೊಡ್ಡ ತಾರಾಬಳಗವನ್ನು ಹೊಂದಿರುವ ಸಿನೆಮಾ. ಅದರಲ್ಲಿ ರವಿಚಂದ್ರನ್, ಪ್ರದೀಪ್ ರಾವತ್, ಅಚ್ಯುತ್, ಸುಧಾ ಬೆಳವಾಡಿ, ಭಜರಂಗಿ ಚೇತನ್ ಮಾತ್ರವಲ್ಲ, ಒಳ್ಳೆಯ ತಂತ್ರಜ್ಞರು ಕೂಡ ಇದ್ದಾರೆ. ಚಿತ್ರದಲ್ಲಿ ನಾನು ಉಪೇಂದ್ರ ಅವರ ಜೋಡಿಯಾಗಿ ಹಾಗೂ ರವಿಚಂದ್ರನ್ ಅವರು ಉಪೇಂದ್ರ ಅವರ ಅಣ್ಣನಾಗಿ ನಟಿಸಿದ್ದಾರೆ. ಅದಲ್ಲದೆ ಪ್ರಜ್ವಲ್ ದೇವರಾಜ್ ಅವರೊಂದಿಗೆ ‘ಅಬ್ಬರ’ ಮತ್ತು ‘ಲವ್ ಮಾಕ್ಟೇಲ್’ ಖ್ಯಾತಿಯ ಕೃಷ್ಣ ಅವರೊಂದಿಗೆ ‘ಮಿಸ್ಟರ್ ಬ್ಯಾಚುಲರ್’ ಸಿನೆಮಾಗಳಲ್ಲಿ ನಟಿಸುತ್ತಿದ್ದೇನೆ.

ಪ್ರ: ಎಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವುದು ನಿಮ್ಮ ಆಸೆ?
ನಿಮಿಕಾ: ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಬೇಕು, ಎಲ್ಲ ರೀತಿಯ ಪಾತ್ರಗಳನ್ನು ಚೆನ್ನಾಗಿ ಮಾಡುತ್ತೇನೆ ಎನ್ನುವ ಹೆಸರು ಪಡೆಯಬೇಕು ಎನ್ನುವ ಆಕಾಂಕ್ಷೆ ಇದೆ. ದೇವರ ದಯೆಯಿಂದ ಅಂತಹ ಅವಕಾಶಗಳು ಈಗಾಗಲೇ ದೊರಕಿವೆ. ಉದಾಹರಣೆಗೆ ಪ್ರಜ್ವಲ್ ಚಿತ್ರದಲ್ಲಿ ನಾನು ವಿದೇಶದಿಂದ ಮರಳಿರುವ ಯುವತಿ. ಆದರೆ ವರ್ತನೆ ರೌಡಿಯಂತೆ ಇರುತ್ತದೆ! ಉಪೇಂದ್ರ ಅವರಿಗೆ ಜೋಡಿಯಾಗಿರುವ ‘ತ್ರಿಶೂಲಂ’ನಲ್ಲಿ ತುಂಬಾ ತಮಾಷೆಯನ್ನು ಎಂಜಾಯ್ ಮಾಡುವಂತಹ ಪಾತ್ರ ನನ್ನದಾಗಿರುತ್ತದೆ. ಇನ್ನು ಲವ್ ಮಾಕ್ಟೇಲ್ ಕೃಷ್ಣ ಅವರೊಂದಿಗೆ ನಟಿಸಿರುವ ‘ಮಿಸ್ಟರ್ ಬ್ಯಾಚುಲರ್’ ಚಿತ್ರದಲ್ಲಿ ಆಧುನಿಕತೆಯ ಹುಡುಗಿಯ ಕ್ಯಾರೆಕ್ಟರ್ ದೊರಕಿದೆ. ಇದರ ಜೊತೆಗೆ ಧರ್ಮಕೀರ್ತಿರಾಜ್ ಅವರೊಂದಿಗೆ ಕೂಡ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ತುಂಬಾ ಮುಗ್ಧ್ದತೆ ತುಂಬಿದ ಹುಡುಗಿಯ ಪಾತ್ರ ಮಾಡುತ್ತಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಇವುಗಳೆಲ್ಲ ಆದಷ್ಟು ಬೇಗ ತೆರೆಕಂಡು ಜನ ಮೆಚ್ಚುವಂತಾಗಲೆನ್ನುವುದು ನನ್ನ ಆಸೆ.

Writer - ಸಂದರ್ಶನ: ಶಶಿಕರ ಪಾತೂರು

contributor

Editor - ಸಂದರ್ಶನ: ಶಶಿಕರ ಪಾತೂರು

contributor

Similar News