ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿಯಲ್ಲಿ ಡಾ.ಕಫೀಲ್ ಖಾನ್ ಹೆಸರು ಸೇರ್ಪಡೆ

Update: 2021-01-31 06:25 GMT

ಗೋರಖ್‌ಪುರ,ಜ.31: ಡಾ.ಕಫೀಲ್ ಖಾನ್ ಮತ್ತು ಇತರ 80 ಜನರ ಹೆಸರುಗಳನ್ನು ಗೋರಖ್‌ಪುರ ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು,ಅವರ ಮೇಲೆ ಪೊಲೀಸರು ನಿಗಾ ಇರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ಎಸ್‌ಪಿ ಜೋಗೇಂದ್ರ ಕುಮಾರ ಅವರ ಸೂಚನೆಯ ಮೇರೆಗೆ 81 ಜನರ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಈಗ ಒಟ್ಟು 1,543 ರೌಡಿಶೀಟರ್‌ಗಳಿದ್ದಾರೆ.

ಖಾನ್ ವಿರುದ್ಧ 2020,ಜೂ.18ರಂದೇ ರೌಡಿ ಶೀಟ್ ತೆರೆಯಲಾಗಿತ್ತು,ಆದರೆ ಮಾಧ್ಯಮಗಳಿಗೆ ಶುಕ್ರವಾರವಷ್ಟೇ ಈ ಮಾಹಿತಿಯನ್ನು ನೀಡಲಾಗಿದೆ ಎಂದು ಅವರ ಸೋದರ ಆದೀಲ್ ಖಾನ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

‘ಉ.ಪ್ರದೇಶ ಸರಕಾರವು ನನ್ನನ್ನು ರೌಡಿ ಶೀಟರ್‌ಗಳ ಪಟ್ಟಿಯಲ್ಲಿ ಸೇರಿಸಿದೆ. ಜೀವನಪರ್ಯಂತ ನನ್ನ ಮೇಲೆ ನಿಗಾಯಿರಿಸುವುದಾಗಿ ಅವರು ತಿಳಿಸಿದ್ದಾರೆ. ಒಳ್ಳೆಯದು,ದಿನದ 24 ಗಂಟೆಯೂ ನನ್ನ ಮೇಲೆ ನಿಗಾಯಿರಿಸಲು ಇಬ್ಬರು ಸೆಕ್ಯೂರಿಟಿ ಗಾರ್ಡ್‌ಗಳನ್ನೂ ಒದಗಿಸಿ. ಕನಿಷ್ಠ್ಧ ಸುಳ್ಳು ಪ್ರಕರಣಗಳಿಂದ ತಪ್ಪಿಸಿಕೊಳ್ಳಲಾದರೂ ನನಗೆ ಸಾಧ್ಯವಾಗಬಹುದು ’ ಎಂದು ಖಾನ್ ಶನಿವಾರ ಬಿಡುಗಡೆಗೊಳಿಸಿದ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹೇಗಿದೆಯೆಂದರೆ ಕ್ರಿಮಿನಲ್‌ಗಳ ಮೇಲೆ ನಿಗಾಯಿರಿಸಲಾಗುವುದಿಲ್ಲ,ಆದರೆ ಅಮಾಯಕ ವ್ಯಕ್ತಿಗಳ ವಿರುದ್ಧ ರೌಡಿ ಶೀಟ್‌ಗಳನ್ನು ತೆರೆಯಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಗೋರಖ್‌ಪುರದ ಬಾಬಾ ರಾಘವ ದಾಸ ಮೆಡಿಕಲ್ ಕಾಲೇಜಿನಲ್ಲಿಯ ತನ್ನ ಹುದ್ದೆಗೆ ಮರುನೇಮಕಗೊಳಿಸುವಂತೆ ಕೋರಿ ತಾನು ರಾಜ್ಯ ಸರಕಾರಕ್ಕೆ ಪತ್ರವನ್ನು ಬರೆದಿರುವುದಾಗಿಯೂ ಖಾನ್ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟನೆಗಳ ಸಂದರ್ಭ 2019,ಡಿ.10ರಂದು ಅಲಿಗಡ ಮುಸ್ಲಿಂ ವಿವಿಯಲ್ಲಿ ಭಾಷಣ ಮಾಡಿದ ಬಳಿಕ 2020 ಜನವರಿಯಲ್ಲಿ ಡಾ.ಖಾನ್ ಅವರನ್ನು ಬಂಧಿಸಲಾಗಿತ್ತು ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯಡಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು. 2020,ಸೆ.1ರಂದು ಎನ್‌ಎಸ್‌ಎ ಅಡಿ ಅವರ ಬಂಧನವನ್ನು ರದ್ದುಗೊಳಿಸಿದ್ದ ಅಲಹಾಬಾದ್ ಉಚ್ಚ ನ್ಯಾಯಾಲಯವು ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತ್ತು. ಅಲಿಗಡ ಮುಸ್ಲಿಂ ವಿವಿಯಲ್ಲಿ ಡಾ.ಖಾನ್ ಮಾಡಿದ್ದ ಭಾಷಣವು ದ್ವೇಷ ಅಥವಾ ಹಿಂಸೆಯನ್ನು ಉತ್ತೇಜಿಸಿರಲಿಲ್ಲ ಎಂದು ಅದು ಬೆಟ್ಟು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News